ಸಂಸತ್ ಭವನದ ಹೊರಗೆ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅಮಿತ್ ಶಾ, ರಾಜೀವ್ ಗಾಂಧಿ ಫೌಂಡೇಶನ್‌ನ ಎಫ್‌ಸಿಆರ್‌ಎ (ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆ) ರದ್ದತಿ ಕುರಿತು ಪ್ರಶ್ನೆಗಳನ್ನು ತಪ್ಪಿಸಲು ಸಂಸತ್ತಿನಲ್ಲಿ ಕಾಂಗ್ರೆಸ್ ಗಡಿ ವಿಷಯವನ್ನು ಪ್ರಸ್ತಾಪಿಸಿದೆ. ರಾಜೀವ್ ಗಾಂಧಿ ಪ್ರತಿಷ್ಠಾನ ಚೀನಾ ರಾಯಭಾರ ಕಚೇರಿಯಿಂದ 1.35 ಕೋಟಿ ರೂ. ಪಡೆದಿದೆ ಎಂದು ಆರೋಪಿಸಿದ ಅಮಿತ್ ಶಾ, ಇದು ಎಫ್‌ಸಿಆರ್‌ಎ ನಿಯಮಗಳಿಗೆ ಅನುಸಾರವಾಗಿಲ್ಲ. ಹೀಗಾಗಿ ಅದರ ನೋಂದಣಿಯನ್ನು ರದ್ದುಗೊಳಿಸಲಾಗಿದೆ. ಜವಾಹರಲಾಲ್ ನೆಹರೂ ಅವರು ತಮಗಿದ್ದ ಚೀನಾ ಮೇಲಿನ ಪ್ರೀತಿಯಿಂದಾಗಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಸಿಕ್ಕಿದ್ದ ಖಾಯಂ ಸ್ಥಾನವನ್ನು ತ್ಯಾಗ ಮಾಡಿ ಚೀನಾಗೆ ನೀಡಿದ್ದಾರೆ. ಭಾರತೀಯ ಸೈನಿಕರ ಶೌರ್ಯವನ್ನು ಶ್ಲಾಘಿಸಿದ ಶಾ, ನಾನು ಸ್ಪಷ್ಟವಾಗಿ ಹೇಳಲು ಬಯಸುತ್ತೇನೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇರುವವರೆಗೂ ನಮ್ಮ ಒಂದು ಇಂಚು ಭೂಮಿಯನ್ನೂ ಯಾರಿಂದಲೂ ವಶಪಡಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಭರವಸೆ ನೀಡಿದರು.