ಮುಂಗಾರು ವಿಳಂಬವಾಗಿದ್ದರಿಂದ ಕೇವಲ ಕೃಷಿ ಮಾತ್ರವಲ್ಲದೇ ಕುಡಿಯವ ನೀರಿಗೂ ಹಾಹಾಕಾರ. ಮಲೆನಾಡಿನ ಜಿಲ್ಲೆಗಳು ಸೇರಿದಂತೆ ಕರಾವಳಿ ಹಾಗೂ ಕಲ್ಯಾಣ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಕುಡಿಯಲು ನೀರಿಲ್ಲದೇ ಜನ ಪರದಾಡುತ್ತಿದ್ದಾರೆ. ಈ ಸಂಬಂಧ ಪರಿಹಾರ ಕ್ರಮ ಕೈಗೊಳ್ಳುವ ಕುರಿತು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು ಸಭೆ ನಡೆಸಲಿದ್ದಾರೆ.
ಸಾಮಾನ್ಯವಾಗಿ ಮುಂಗಾರು ಜೂನ್ 1ರಂದು ಆರಂಭವಾಗಬೇಕು. ಆದರೆ ಈ ಬಾಗಿ ನಿರೀಕ್ಷಿತ ಅವಧಿಗಿಂತಲೂ ಮುಂಗಾರು ವಿಳಂಬವಾಗಿದೆ. ಈ ಸಂಬಂಧ ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆ, ಶಿವಮೊಗ್ಗ, ಕಲಬುರಗಿ, ಕೊಪ್ಪಳ, ಕೊಡಗು ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಜನರಿಗೆ ಕುಡಿಯಲು ನೀರು ಸಿಗುತ್ತಿಲ್ಲ. ಇತ್ತ ಬಿಸಿಲು ಸಹ ಹೆಚ್ಚಾಗಿದೆ. ಕಳೆದ ಬಾರಿ ವಾಡಿಕೆಯಷ್ಟು ಮಳೆಯಾದರೂ ಸಹ ಪ್ರಸಕ್ತ ವರ್ಷ ಅಧಿಕ ಬಿಸಿಲು ಹಾಗೂ ನೀರಿನ ಬಳಕೆ ಹೆಚ್ಚಾಗಿದ್ದರಿಂದ ರಾಜ್ಯದ ಹಲವು ಡ್ಯಾಂಗಳು ಸಹ ಖಾಲಿಯಾಗಿವೆ. ತುಂಗಭದ್ರಾ, ಲಿಂಗನಮಕ್ಕಿ, ಆಲಮಟ್ಟಿ, ಬಸವಸಾಗರ, ಕೆ.ಆರ್.ಎಸ್‌ಡ್ಯಾಂಗಳಲ್ಲಿ ನೀರಿನ ಸಂಗ್ರಹವಿಲ್ಲ. ಕಳೆದ ವರ್ಷಕ್ಕಿಂತಲೂ ಡ್ಯಾಂಗಳಲ್ಲಿ ಅತೀ ಕಡಿಮೆ ನೀರಿದೆ. ನೀರಿನ ಸಮಸ್ಯೆ ನೀಗಲು ಸಾಕಷ್ಟು ಸಮಯ ಹಿಡಿಯುತ್ತದೆ. ಅದಲ್ಲದೇ ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಬಸರಿಹಾಳ ಗ್ರಾಮದಲ್ಲಿ ಕಲುಷಿತ ನೀರು ಕುಡಿದು ಸುಮಾರು 30ಕ್ಕೂ ಅಧಿಕ ಮಂದಿ ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದರು. ಮೂರು ಮಂದಿ ಮೃತಪಟ್ಟರು. ಮುಂದೆ ಇಂತಹ ಘಟನೆ ಮರುಕಳಿಸದಂತೆ ಎಚ್ಚರಿಕೆ ವಹಿಸುವಂತೆ, ಶುದ್ಧ ನೀರು ಪೂರೈಸುವಂತೆ ಅಗತ್ಯ ಕ್ರಮ ಕೈಗೊಳ್ಳಲು ಸಿಎಂ ಸಿದ್ದರಾಮಯ್ಯ ಇಂದು ಸಭೆ ನಡೆಸಿ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ