ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿಗರ ಬಗ್ಗೆ ಬಿಜೆಪಿಯ ಗೋಪಿನಾಥ್ ಪ್ರಶ್ನೆ ಕೇಳಿದರು. ಇದಕ್ಕೆ ಉತ್ತರ ನೀಡಿದ ಪರಮೇಶ್ವರ್, ವಿದೇಶಿ ಪ್ರಜೆಗಳು ವಿದ್ಯಾಭ್ಯಾಸ, ಪ್ರವಾಸಕ್ಕೆ ಸೇರಿ ಹಲವು ವಿಚಾರಕ್ಕೆ ರಾಜ್ಯಕ್ಕೆ ಬರುತ್ತಾರೆ. ರಾಜ್ಯದಲ್ಲಿ ಸುಮಾರು 4,890 ವಿದೇಶಿ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಲು ಬಂದಿದ್ದಾರೆ. ಇದಲ್ಲದೆ ಒಟ್ಟಾರೆ ಬೆಂಗಳೂರು ನಗರ ಮತ್ತು ಉಳಿದ ಜಿಲ್ಲೆಯಲ್ಲಿ ಒಟ್ಟು 8,862 ವಿದೇಶಿಯರು ವಿದೇಶಿ ವೀಸಾದ ಮೇಲೆ ನೆಲೆಸಿದ್ದಾರೆ. ಇದರಲ್ಲಿ 754 ವಿದೇಶಿಯರು ವೀಸಾ ಮುಕ್ತಾಯವಾದರೂ ಇಲ್ಲೇ ಇದ್ದಾರೆ. ವೀಸಾ ಅವಧಿ ಮುಗಿದವರನ್ನು ಶೀಘ್ರವಾಗಿ ವಾಪಸ್ ಕಳುಹಿಸುವ ಕೆಲಸ ಮಾಡುತ್ತೇವೆ. ವಿದೇಶಿ ಪ್ರಜೆಗಳ ಮೇಲೆ ಅಕ್ರಮ ಚಟುವಟಿಕೆಗಳ ವಿಚಾರವಾಗಿ ರಾಜ್ಯದಲ್ಲಿ 502 ದೂರು ದಾಖಲಾಗಿದೆ. ಆಫ್ರಿಕಾ ಮತ್ತು ನೈಜೀರಿಯಾದಿಂದ ಬಂದವರೇ ಇಂತಹ ಪ್ರಕರಣದಲ್ಲಿ ಜಾಸ್ತಿ ಭಾಗಿಯಾಗಿದ್ದಾರೆ. ಹೀಗಾಗಿ ವೀಸಾ ಮುಗಿದವರನ್ನು ವಾಪಸ್ ಕಳುಹಿಸುವ ಕೆಲಸ ಕಟ್ಟುನಿಟ್ಟಾಗಿ ಮಾಡುತ್ತೇವೆ ಎಂದು ಸ್ಪಷ್ಟನೆ ನೀಡಿದರು.