ರಾಜ್ಯದ 32 ಲಕ್ಷ ರೈತರಿಗೆ 24 ಸಾವಿರ ಕೋಟಿ ರುಪಾಯಿ ಸಾಲ ನೀಡುವ ತೀರ್ಮಾನವನ್ನು ನಮ್ಮ ಸರ್ಕಾರ ತೆಗೆದುಕೊಂಡಿದೆ. ಇದು ನಮ್ಮ ಸರ್ಕಾರ ಸಹಕಾರ ಕ್ಷೇತ್ರಕ್ಕೆ ಮತ್ತು ರೈತರಿಗೆ ಕೊಟ್ಟಕೊಡುಗೆಯಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಸೇಡಂ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ 69ನೇ ಅಖಿಲ ಭಾರತ ಸಹಕಾರ ಸಪ್ತಾಹ 2022 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರೈತನ ಬದುಕು ಹಸನಾಗಬೇಕಾದರೆ ರೈತನಿಗೆ ಸ್ಕೇಲ್ ಆಫ್ ಫೈನಾನ್ಸ್ ಆಧಾರದಲ್ಲಿ ಬೆಳೆದ ಬೆಳೆಗೆ ದರ ನಿರ್ಧಾರವಾಗಬೇಕು. ಆ ಮೂಲಕ ರೈತ ಸ್ವಾವಲಂಬಿಯಾಗಬೇಕು. ಸ್ವಾಭಿಮಾನ ಇಲ್ಲದಲ್ಲಿ ಆತ್ಮಾಭಿಮಾನವಿಲ್ಲ, ಆತ್ಮಾಭಿಮಾನವಿಲ್ಲದಲ್ಲಿ ಸಾಧನೆಯಿಲ್ಲ. ಈ ನಿಟ್ಟಿನಲ್ಲಿ ಸರ್ಕಾರ ಜಾರಿಗೆ ತಂದಿರುವ ಕಾಯಕ ಯೋಜನೆಗಳ ಅನುಷ್ಠಾನವಾಗಬೇಕು. ರೈತರಿಗೆ ಅಲ್ಪಾವಧಿ ಸಾಲ ವಿತರಣೆಯಾಗಬೇಕು ಎಂದರು.