ಬೆಂಗಳೂರಿನಲ್ಲಿ ನಡೆಯಬೇಕಿದ್ದ ಶನಿವಾರ ಹಾಗೂ ಭಾನುವಾರದ ರೋಡ್ ಶೋಗಳಲ್ಲಿ ಬದಲಾವಣೆ ಮಾಡಲಾಗಿದೆ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಭಾನುವಾರ ನೀಟ್ ಪರೀಕ್ಷೆ ಇದ್ದು, ರೋಡ್ ಶೋದಿಂದ ಅಭ್ಯರ್ಥಿಗಳಿಗೆ ಸಮಸ್ಯೆ ಆಗುವ ಬಗ್ಗೆ ಪ್ರಧಾನಿಯವರ ಗಮನಕ್ಕೆ ತಂದೆವು. ಪ್ರಧಾನಿಯವರು ಮಕ್ಕಳ ಪರೀಕ್ಷೆ ಬಗ್ಗೆ ಕಾಳಜಿಯುಳ್ಳವರು. ಪರೀಕ್ಷೆ ಬಗ್ಗೆ ಚರ್ಚೆ ನಡೆಸಿ, ರೋಡ್ ಶೋದಿಂದ ಒಬ್ಬ ವಿದ್ಯಾರ್ಥಿಗೂ ತೊಂದರೆ ಆಗಬಾರದು ಎಂದು ಹೇಳಿ ಬದಲಾವಣೆ ಮಾಡಿಸಿದರು.ಪ್ರಧಾನಿ ಅಪೇಕ್ಷೆಯಂತೆ ಕಾರ್ಯಕ್ರಮದಲ್ಲಿ ಬದಲಾವಣೆ ಮಾಡಲಾಗಿದೆ. ಶನಿವಾರ ಮತ್ತು ಭಾನುವಾರದ ಕಾರ್ಯಕ್ರಮಗಳು ಅದಲು ಬದಲಾಯಿಸಿದ್ದೇವೆ. 26.5 ಕಿ.ಮೀ.ನ ದೊಡ್ಡ ರೋಡ್ ಶೋ ಶನಿವಾರ ಇರಲಿದ್ದು, ಭಾನುವಾರ ಚಿಕ್ಕ ರೋಡ್ ಶೋ ಇರುತ್ತದೆ. ಭಾನುವಾರದ ರೋಡ್ ಶೋ ನಡೆಯುವ ದಾರಿಯಲ್ಲಿ ಪರೀಕ್ಷಾ ಕೇಂದ್ರಗಳು ಕಡಿಮೆ ಇದೆ ಇದರಿಂದ ಯಾವುದೇ ಮಕ್ಕಳಿಗೆ ಸಮಸ್ಯೆ ಆಗದಂತೆ ನೋಡಿಕೊಂಡಿದ್ದೇವೆ. ವಿದ್ಯಾರ್ಥಿಗಳು ಹಾಲ್ ಟಿಕೆಟ್ ತೋರಿಸಿದರೆ ಪೊಲೀಸರು ಪರೀಕ್ಷಾ ಕೇಂದ್ರಕ್ಕೆ ಹೋಗಲು ಅವಕಾಶ ಕೊಡುತ್ತಾರೆ. ಪೊಲೀಸರಿಗೆ ಸಹಕರಿಸುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.