ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಆಟಾಟೋಪ ಮುಂದುವರಿದಿದ್ದು, ಜಪಾನ್ ಜನರು ಸಾವಿನ ನೆರಳಲ್ಲೇ ಬದುಕುವಂತಾಗಿದೆ. ದಕ್ಷಿಣ ಕೊರಿಯಾ ಮೇಲಿನ ಸಿಟ್ಟಿಗೆ ಕಿಮ್ ಉಡಾಯಿಸಿದ ಕ್ಷಿಪಣಿ ಜಪಾನ್ ಮೇಲೆ ಬೀಳುವ ಸಂದರ್ಭ ಸೃಷ್ಟಿಯಾಗಿ, ಲಕ್ಷಾಂತರ ಜನ ಜೀವ ಕೈಯಲ್ಲಿಡಿದು ಓಡಿದ ಘಟನೆ ಜಪಾನ್‌ನಲ್ಲಿ ನಡೆದಿದೆ. ಅಮೆರಿಕ ಜೊತೆ ದಕ್ಷಿಣ ಕೊರಿಯಾ ಜಂಟಿ ಸಮರಭ್ಯಾಸ ನಡೆಸಿದ ನಂತರ ಸಂಪೂರ್ಣವಾಗಿ ಸಂಪರ್ಕ ಕಡಿದುಕೊಂಡಿದೆ ಉತ್ತರ ಕೊರಿಯಾ. ಈ ಸಿಟ್ಟನ್ನು ಮತ್ತೊಂದು ನೆರೆ ರಾಷ್ಟ್ರ ಜಪಾನ್ ಮೇಲೆ ಹಾಕುತ್ತಿದೆ ಉತ್ತರ ಕೊರಿಯಾ.ಗುರುವಾರ ಬೆಳಗ್ಗೆ ಉತ್ತರ ಕೊರಿಯಾ ದಿಢೀರ್ ಪರಮಾಣು ಸಾಮರ್ಥ್ಯದ ಕ್ಷಿಪಣಿ ಉಡಾಯಿಸಿದೆ ಎಂಬ ವಿಚಾರ ಗೊತ್ತಾಗತ್ತಿದ್ದಂತೆ ಜಪಾನ್ ಅಲರ್ಟ್ ಆಗಿತ್ತು. ಉ.ಕೊರಿಯಾ ಕ್ಷಿಪಣಿ ನೇರವಾಗಿ ಜಪಾನ್‌ನ ಹೊಕ್ಕೈಡೊ ಪ್ರದೇಶದ ಮೇಲೆ ಬೀಳುವ ಬಗ್ಗೆ ಮುನ್ಸೂಚನೆ ಸಿಕ್ಕಿತ್ತು. ಆಗ ಜಪಾನ್ ಸರ್ಕಾರ ತನ್ನ ಪ್ರಜೆಗಳಿಗೆ ತಕ್ಷಣ ಕಟ್ಟಡ ಅಥವಾ ಅಂಡರ್ ಪಾಸ್‌ಒಳಗೆ ಓಡುವಂತೆ ತುರ್ತು ಸೂಚನೆ ನೀಡಿತ್ತು. ಹೀಗೆ ಜನರು ಭಯದಲ್ಲಿ ಓಡಿದ್ದರು ಕೂಡ. ಕೊನೆಗೆ ಯಾವುದೇ ಕ್ಷಿಪಣಿ ಜಪಾನ್ ಮೇಲೆ ಬಿದ್ದಿಲ್ಲ ಎನ್ನುವುದು ಕನ್ಫರ್ಮ್ ಆದ ನಂತರ ನಿಟ್ಟುಸಿರು ಬಿಟ್ಟರು.