2015-16ರ ಅವಧಿಯಲ್ಲಿ ತಮ್ಮ ಕಿಂಗ್‌ಫಿಷರ್ ಏರ್‌ಲೈನ್ಸ್ ನಗದು ಕೊರತೆ ಎದುರಿಸುತ್ತಿದ್ದ ಸಮಯದಲ್ಲೇ ಉದ್ಯಮಿ ವಿಜಯ ಮಲ್ಯ ಇಂಗ್ಲೆಂಡ್ ಮತ್ತು ಫ್ರಾನ್ಸ್ ದೇಶಗಳಲ್ಲಿ 330 ಕೋಟಿ ರೂ. ಬ್ರಿಟನ್ ನಲ್ಲಿ 80 ಕೋಟಿ ರೂ., ಫ್ರಾನ್ಸ್‌ನಲ್ಲಿ 250 ಕೋಟಿ ರೂ. ಮೌಲ್ಯದ ಆಸ್ತಿ ಖರೀದಿಸಿದ್ದಾರೆ ಎಂದು ಕೇಂದ್ರೀಯ ತನಿಖಾ ದಳ ಮುಂಬೈ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿರುವ 3ನೇ ಪೂರಕ ಆರೋಪಪಟ್ಟಿಯಲ್ಲಿ ಉಲ್ಲೇಖಿಸಿದೆ. ಅಷ್ಟೇ ಅಲ್ಲದೇ 2017ರಲ್ಲಿ ವಿಜಯ ಮಲ್ಯ ಅವರ ಆಸ್ತಿ ಮೌಲ್ಯ 7,500 ಕೋಟಿ ರೂ. ಎಂದು ಸ್ವಿಸ್ ಬ್ಯಾಂಕ್ ಅಂದಾಜಿಸಿದ್ದು, ಬ್ಯಾಂಕ್‌ಗಳ ಸಾಲ ತೀರಿಸಲು ಬೇಕಾದಷ್ಟು ಹಣ ಅವರ ಬಳಿ ಇದೆ. ಯುಕೆನಲ್ಲಿ ಸುಮಾರು 44 ಮದ್ಯ ಘಟಕಗಳನ್ನ ಅವರು ಸ್ಥಾಪಿಸಿದ್ದರು. ಆ ಮೂಲಕ ಅವರು ಯುರೋಪಿನಾದ್ಯಂತ ಹಲವಾರು ಕಡೆ ಹೂಡಿಕೆ ಮತ್ತು ಆಸ್ತಿ ಖರೀದಿಸಿದ್ದಾರೆ ಎಂದು ಹೇಳಿದೆ.