ವಿಶ್ವದಲ್ಲೇ ಮೊದಲ ಬಾರಿಗೆ ನ್ಯೂಜಿಲೆಂಡ್‌ಸರ್ಕಾರ ಹಸುಗಳು ತೇಗಿದರೆ ಹಾಗೂ ಹೂಸು ಬಿಟ್ಟರೆ ಅವುಗಳನ್ನು ಸಾಕಿದ ರೈತರ ಮೇಲೆ ತೆರಿಗೆ ವಿಧಿಸಲು ಮುಂದಾಗಿದೆ. ಕೃಷಿ ಉದ್ಯಮದಿಂದ ಏರುತ್ತಿರುವ ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ನಿಯಂತ್ರಿಸಲು ಸರ್ಕಾರ ಹೊಸ ಹವಾಮಾನ ಬದಲಾವಣೆ ಪ್ರಸ್ತಾವನೆ ಸಲ್ಲಿಸಿದೆ. ನ್ಯೂಜಿಲೆಂಡ್‌ನಲ್ಲಿ ಭಾರೀ ಪ್ರಮಾಣದಲ್ಲಿ ಹೈನೋದ್ಯಮ ನಡೆಯುತ್ತಿದೆ. ದನದ ಮೂತ್ರದಲ್ಲಿ ನೈಟ್ರಸ್ ಆಕ್ಸೈಡ್ ಇದ್ದರೆ ಹಸುವಿನ ಹೂಸಿನಲ್ಲಿ ಮೀಥೇನ್ ಅನಿಲ ಇದೆ. ಇದರಿಂದಾಗಿ ಹಸಿರು ಮನೆ ಪರಿಣಾಮ ಹೆಚ್ಚಾಗುತ್ತದೆ ಎನ್ನುವುದು ನ್ಯೂಜಿಲೆಂಡ್‌ಸರ್ಕಾರದ ವಾದ. ಮಿತಿಮೀರಿದ ಹೈನುಗಾರಿಕೆ ನಿಯಂತ್ರಿಸಿ ಇಂಗಾಲಕ್ಕೆ ಕಡಿವಾಣ ಹಾಕುವ ಉದ್ದೇಶವನ್ನು ಸರ್ಕಾರ ಹೊಂದಿದೆ. ತೆರಿಗೆಯಿಂದ ಸಂಗ್ರಹವಾದ ಹಣವನ್ನು ಹವಾಮಾನ ಸ್ನೇಹಿ ತಂತ್ರಗಳನ್ನು ಅಳವಡಿಸಿಕೊಳ್ಳುವ ರೈತರಿಗೆ ಸಂಶೋಧನೆ, ಹೊಸ ತಂತ್ರಜ್ಞಾನಗಳು ಮತ್ತು ಸಬ್ಸಿಡಿಗಳಿಗೆ ಧನಸಹಾಯ ನೀಡಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ. ಸರ್ಕಾರಗಳು ಪ್ರಸ್ತಾಪಿಸಿದ ತೆರಿಗೆ ಅಡಿಯಲ್ಲಿ, ರೈತರು 2025 ರಲ್ಲಿ ತೆರಿಗೆ ಪಾವತಿಸಬೇಕಾಗುತ್ತದೆ. ತೆರಿಗೆ ದರವನ್ನು ಸರ್ಕಾರ ಇನ್ನೂ ನಿಗದಿ ಮಾಡಿಲ್ಲ.