ಭಾನುವಾರ ರಾಜಧಾನಿ ಫೋರ್ಟ್ ಮೊರೆಸ್‌ಬೈಗೆ ಮೋದಿ ಬಂದಿಳಿದಾಗ ಸೂರ್ಯಾಸ್ತವಾಗಿತ್ತು. ಪಪುವಾ ನ್ಯೂ ಗಿನಿಯಾ ಸರ್ಕಾರ ಸಾಮಾನ್ಯವಾಗಿ ಯಾವುದೇ ವಿದೇಶಿ ಗಣ್ಯರಿಗೆ ಸೂರ್ಯಾಸ್ತದ ಬಳಿಕ ಸಾಂಪ್ರದಾಯಿಕ ಸ್ವಾಗತ ನೀಡುವುದಿಲ್ಲ. ಮೋದಿ ಆಗಮಿಸಿದಾಗ ಶಿಷ್ಟಾಚಾರವನ್ನೇ ಬದಲಿಸಿಕೊಂಡ ಸರ್ಕಾರ ಅವರಿಗೆ ಸಾಂಪ್ರದಾಯಿಕ ಗೌರವದೊಂದಿಗೆ ಸ್ವಾಗತ ಕೋರಿತು. ಮೋದಿ ವಿಮಾನದಿಂದ ಇಳಿದು ಬರುತ್ತಿದ್ದಂತೆ ಪಪುವಾ ನ್ಯೂ ಗಿನಿಯಾ ಪ್ರಧಾನಿ ಜೇಮ್ಸ್ ಮರಪೇ ಸ್ವಾಗತಿಸಿದರು. ಸಂಪ್ರದಾಯ ಮುರಿದು ಸೂರ್ಯಾಸ್ತದ ವೇಳೆ ಸ್ವಾಗತಿಸಿದ ಬಳಿಕ ಅವರು ಮೋದಿ ಅವರ ಕಾಲಿಗೆ ನಮಸ್ಕರಿಸಿದರು. ಈ ವೇಳೆ ಮೋದಿ ಅವರನ್ನು ಮೇಲೆತ್ತಿ ಬೆನ್ನು ತಟ್ಟಿದರು. ಪಪುವಾ ನ್ಯೂ ಗಿನಿಯಾಗೆ ಭೇಟಿ ನೀಡಿದ ಮೊದಲ ಭಾರತದ ಪ್ರಧಾನಿ ಮೋದಿಯಾಗಿದ್ದಾರೆ. ಕೋವಿಡ್‌ಸಮಯದಲ್ಲಿ ಪಪುವಾ ನ್ಯೂ ಗಿನಿಯಾ ಭಾರೀ ಸಂಕಷ್ಟಕ್ಕೆ ಸಿಲುಕಿತ್ತು. ಲಸಿಕೆ ಅಭಿವೃದ್ಧಿ ಪಡಿಸಿದ ದೇಶಗಳು ಪಪುವಾ ನ್ಯೂ ಗಿನಿಯಾಗೆ ಲಸಿಕೆಯನ್ನು ಕಳುಹಿಸಿರಲಿಲ್ಲ. ಯಾರೂ ಸಹಾಯ ಮಾಡದ ಸಂದರ್ಭದಲ್ಲಿ ಭಾರತ 1.32 ಲಕ್ಷ ಕೊರೊನಾ ಲಸಿಕೆಯನ್ನು ತುರ್ತಾಗಿ ಕಳುಹಿಸಿಕೊಟ್ಟಿತ್ತು. ಸಂಕಷ್ಟದಲ್ಲಿದ್ದಾಗ ಸ್ಪಂದಿಸಿದ್ದಕ್ಕೆ ಪಪುವಾ ನ್ಯೂ ಗಿನಿಯಾ ಸರ್ಕಾರ ಮೋದಿ ಅವರಿಗೆ ವಿಶೇಷ ಸ್ವಾಗತ ನೀಡಿದೆ ಎಂದು ವಿಶ್ಲೇಷಿಸಲಾಗುತ್ತದೆ.