ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಪ್ರತಾಪ್ ಸಿಂಹ ಅವರು, ಚುನಾವಣಾ ಪ್ರಚಾರದಲ್ಲಿ ಡಿ.ಕೆ ಶಿವಕುಮಾರ್ ಉಚಿತ, ಖಚಿತ, ನಿಶ್ಚಿತ ಅಂತ ಹೇಳಿದ್ರು. ಸಿದ್ದರಾಮಯ್ಯ ಅವರು ಎಲ್ಲರಿಗೂ ಉಚಿತ ಅಂದ್ರು. ರಾಜಸ್ಥಾನ, ಪಂಜಾಬ್ ಎಲ್ಲಾ ಕಡೆ ಭರವಸೆ ಕೊಟ್ಟು ಟೋಪಿ ಹಾಕಿದ್ರು. ಅದಕ್ಕೆ ನಾವು ಈ ಭರವಸೆಗಳನ್ನು ಜನರು ನಂಬಲ್ಲ ಅಂತಾ ನಿರ್ಲಕ್ಷ್ಯ ಮಾಡಿದ್ವಿ. ಆದರೆ ಜನರು ಅದನ್ನು ನಂಬಿಕೊಂಡು ಮತ ಹಾಕಿದ್ದಾರೆ. ಅವರನ್ನು ಯಾಮಾರಿಸುವ ಕೆಲಸ ಮಾಡಿದ್ದಾರೆ. ನಾವು ಏನೂ ಹೇಳಲ್ಲ, ಜನ ಯಾಮಾರಿರೋದು ಅವರಿಗೆ ಅರ್ಥ ಆಗಲಿದೆ. ಈಗ ಕಂಡಿಷನ್ ಗಳನ್ನು ಹಾಕುವ ಕೆಲಸ ನಡೆಯುತ್ತಿದೆ. ಈ ಕಂಡಿಷನ್ ನಿಂದ ಬಹುತೇಕ ಬೆಂಗಳೂರು ಜನರಿಗೆ ಗೃಹ ಜ್ಯೋತಿ ಲಾಭ ಸಿಗುವುದಿಲ್ಲ. ಗೃಹ ಲಕ್ಷ್ಮಿ ವಿಚಾರದಲ್ಲೂ ತೆರಿಗೆದಾರರಿಗೆ ಯೋಜನೆ ಇಲ್ಲ ಎಂದಿದ್ದಾರೆ. ಯುವನಿಧಿ ವಿಚಾರದಲ್ಲೂ ಯುವ ಜನರಿಗೆ ಮೋಸ ಆಗಲಿದೆ. ಕೊವೀಡ್ ಬಳಿಕ ಕೆಲಸ ಕಳೆದುಕೊಂಡವರು ಕೂಡ ಯೋಜನೆ ಲಾಭ ಪಡೆಯಲು ಮತ ಹಾಕಿದ್ದರು. ಕಾಂಗ್ರೆಸ್ ನಾಯಕರನ್ನು ನೋಡಿದರೆ ಟೋಪಿ ಹಾಕಲು ಬಂದಿದ್ದಾರೆ ಎಂದು ಜನ ಹೇಳಲಿದ್ದಾರೆ. ಬಸ್ ಪ್ರಯಾಣದಿಂದಲೂ ದೊಡ್ಡ ನಷ್ಟವಾಗಲಿದೆ. ಇದಕ್ಕೆಲ್ಲ ಸಿದ್ದರಾಮಯ್ಯ ಅವರು ಎಲ್ಲಿಂದ ಹಣ ತರುತ್ತಾರೆ. ಕಾಂಗ್ರೆಸ್ ಗ್ಯಾರಂಟಿಯಿಂದ ಶ್ರೀಲಂಕಾ , ಪಾಕಿಸ್ತಾನ ರೀತಿಯ ಪರಿಸ್ಥಿತಿ ಕರ್ನಾಟಕಕ್ಕೆ ಬರಬಾರದು ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.