ರಾಜ್ಯ ವಿಧಾನಸಭಾ ಚುನಾವಣೆಗೆ ಕೇವಲ ಒಂದು ತಿಂಗಳು ಮಾತ್ರ ಬಾಕಿ ಇದೆ. ಕಾಂಗ್ರೆಸ್, ಜೆಡಿಎಸ್, ಆಮ್ ಆದ್ಮಿ ಪಕ್ಷ ಎಲ್ಲವೂ ಕನಿಷ್ಟ ಮೊದಲ ಪಟ್ಟಿಯನ್ನಾದರೂ ಬಿಡುಗಡೆ ಮಾಡಿವೆ. ಆದರೆ ಬಿಜೆಪಿ ಪಕ್ಷ ಮಾತ್ರ ತನ್ನ ಮೊದಲ ಪಟ್ಟಿಯನ್ನೂ ಬಿಡುಗಡೆ ಮಾಡಿಲ್ಲ. ಇಂದು ನಾಳೆ, ನಾಡಿದ್ದು ಬಿಜೆಪಿ ತನ್ನ ಮೊದಲ ಪಟ್ಟಿ ಬಿಡುಗಡೆ ಮಾಡಲಿದೆ ಎನ್ನುವ ನಿರೀಕ್ಷೆಯಲ್ಲಿ ಜನ ಕಾಯುತ್ತಿದ್ದಾರೆ.ಸತತ ಮೂರು ದಿನಗಳ ಸರಣಿ ಸಭೆಗಳ ಹೊರತಾಗಿಯೂ ಸೋಮವಾರವೂ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಪಕ್ಷವು ಸಾಧ್ಯವಾಗಲಿಲ್ಲ.
ಸೋಮವಾರ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರು ಸಿಎಂ ಬಸವರಾಜ ಬೊಮ್ಮಾಯಿ, ಕರ್ನಾಟಕ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್, ರಾಜ್ಯ ಬಿಜೆಪಿ ಮುಖ್ಯಸ್ಥ ನಳಿನ್ ಕುಮಾರ್ ಕಟೀಲ್, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮತ್ತು ಇತರರೊಂದಿಗೆ ಎರಡು ಸುತ್ತಿನ ಸಭೆ ನಡೆಸಿದರು. ನಡ್ಡಾ ಅವರನ್ನು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಭೇಟಿಯಾದರು. ಆದರೆ ಇವು ಯಾವುದೂ ಪ್ರಯೋಜನವಾಗಲೇ ಇಲ್ಲ. ನಿರೀಕ್ಷೆಯಂತೆ ಬಿಜೆಪಿ ಮೊದಲ ಪಟ್ಟಿ ಬಿಡುಗಡೆ ಆಗಲೇ ಇಲ್ಲ.
ಭಾನುವಾರ ನಡೆದ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಎಲ್ಲಾ ಸ್ಥಾನಗಳ ಬಗ್ಗೆ ವಿವರವಾಗಿ ಚರ್ಚಿಸಲಾಯಿತು. ನಾಳೆಯೊಳಗೆ ಮೊದಲ ಪಟ್ಟಿ ಹೊರಬೀಳುವ ಸಾಧ್ಯತೆ ಇದೆ ಎಂದು ಸಭೆಯ ನಂತರ ಯಡಿಯೂರಪ್ಪ ಮಾಧ್ಯಮಗಳಿಗೆ ತಿಳಿಸಿದರು.