ಬೆಂಗಳೂರಿನಲ್ಲಿ ಟೆಕ್ ಸಮ್ಮಿಟ್-2023ರ ಹಿನ್ನೆಲೆಯಲ್ಲಿ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ. ಇದೇ ವೇಳೆ ಉದಯನಿಧಿ ಸ್ಟಾಲಿನ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ್ದಾರೆ. ಉದಯನಿಧಿ ಸ್ಟಾಲಿನ್ ಯಾವ ಸಂದರ್ಭದಲ್ಲಿ ಆ ಹೇಳಿಕೆ ಕೊಟ್ಟಿದ್ದಾರೋ ಗೊತ್ತಿಲ್ಲ. ಯಾವ ಧರ್ಮದಲ್ಲಿ ಸಾಮಾಜಿಕ ಸಮಾನತೆ, ಆರ್ಥಿಕ ಸಮಾನತೆ ಇಲ್ಲವೋ, ಯಾವ ಧರ್ಮದಲ್ಲಿ ಮನುಷ್ಯರ ನಡುವೆ ಭೇದ-ಭಾವ ಇರುತ್ತದೆಯೋ ಅದು ಧರ್ಮವೇ ಅಲ್ಲ. ನಾವೆಲ್ಲರೂ ಸಂವಿಧಾನದ ಅಡಿಯಲ್ಲಿ ಇದ್ದೇವೆ. ಸಂವಿಧಾನವೇ ನಮ್ಮ ಧರ್ಮ, ಬುದ್ಧ, ಬಸವ ಹಾಕಿಕೊಟ್ಟಿರುವುದನ್ನ ಅನುಸರಿಸುತ್ತೇವೆ. ನನ್ನ ವೈಯಕ್ತಿಕ ಅಭಿಪ್ರಾಯ ಹೇಳುವುದಾದರೆ ಸಂವಿಧಾನವೇ ನಮ್ಮ ಧರ್ಮ ಆಗಬೇಕು ಎಂದು ಹೇಳಿದ್ದಾರೆ. ಇದೇ ವೇಳೆ ಉಚಿತ ಯೋಜನೆಗಳ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ್ಮೇಲೆ ಪ್ರಧಾನಿಗೆ ದೇಶದ ಆರ್ಥಿಕತೆ ಮೇಲೆ ಪ್ರೀತಿ ಬಂದಿದೆ. ಬರೀ ಮನ್ ಕೀ ಬಾತ್ ಅಂತಾರೆ, ಆರ್ಥಿಕತೆ ಬಗ್ಗೆ ಒಂದು ಮಾತನ್ನೂ ಆಡುವುದಿಲ್ಲ. ರಾಜ್ಯ ಆರ್ಥಿಕವಾಗಿ ಸುಭದ್ರವಾಗಿದೆ. ನಾವು ಇವರ ಬಳಿ ಪಾಠ ಕಲಿಯುವ ಅವಶ್ಯಕತೆ ಇಲ್ಲ. ನಮ್ಮ ರಾಜ್ಯದ ಆರ್ಥಿಕ ಪರಿಸ್ಥಿತಿ ಚೆನ್ನಾಗಿಯೇ ಇದೆ. ರೇವಡಿ ಕಲ್ಚರ್ ಅಂತೀರಾ, ಆರ್ಥಿಕ ದಿವಾಳಿ ಅಂತೀರಾ, ನಮ್ಮ ಗೃಹಲಕ್ಷ್ಮಿ ಯೋಜನೆಗಳನ್ನೇ ಕಾಪಿ ಮಾಡಿ, ಮಧ್ಯಪ್ರದೇಶದಲ್ಲಿ ಲಾಡ್ಲಿ ಬೆಹೆನ್ ಅಂತಾ ಮಾಡಿದ್ದೀರಿ.ಮೋದಿಯವರೇ ಕರ್ನಾಟಕದ ಆರ್ಥಿಕ ಪರಿಸ್ಥಿತಿ ಬಗ್ಗೆ ನೀವು ಚಿಂತೆ ಮಾಡ್ಬೇಡಿ. ಕರ್ನಾಟಕದಲ್ಲಿ 14 ಬಜೆಟ್ ಮಂಡಿಸಿದ ಸಿದ್ದರಾಮಯ್ಯನವರು ಇದ್ದಾರೆ. ನೀವು ದೇಶವನ್ನ ನೋಡಿಕೊಳ್ಳಿ ಸಾಕು ಎಂದು ತಿರುಗೇಟು ನೀಡಿದ್ದಾರೆ.