ಸಿಂಗಾಪುರಕ್ಕೆ ಹಾರಿದ ಹೆಚ್‌ಡಿ ಕುಮಾರಸ್ವಾಮಿ: ಅತಂತ್ರ ಸ್ಥಿತಿ ಬಂದಲ್ಲಿ ಯಾರೊಂದಿಗೆ ಕೈ ಜೋಡಿಸಬೇಕು ಎಂಬುದರ ಚರ್ಚೆ

ಕರ್ನಾಟಕ ವಿಧಾನಸಭಾ ಚುನಾವಣೆ ಘೋಷಣೆಗೂ 3 ತಿಂಗಳ ಮುನ್ನವೇ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದ ಹೆಚ್​.ಡಿ. ಕುಮಾರಸ್ವಾಮಿ ಮತದಾನ ಮುಕ್ತಾಯವಾಗುತ್ತಿದ್ದಂತೆ ಮಾಜಿ ಮುಖ್ಯಮಂತ್ರಿ ಹೆಚ್.​ಡಿ. ಕುಮಾರಸ್ವಾಮಿ ರಿಲ್ಯಾಕ್ಸ್‌ಮಾಡಲು ವಿದೇಶಕ್ಕೆ ಹಾರಿದ್ದಾರೆ. ಮತದಾನ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದಂತೆಯೇ ಮಧ್ಯರಾತ್ರಿ ತಮ್ಮ ಆಪ್ತರೊಂದಿಗೆ ಬೆಂಗಳೂರಿನಿಂದ ಸಿಂಗಾಪುರಕ್ಕೆ ಹೋಗಿದ್ದಾರೆ. ಇನ್ನು ಅಲ್ಲಿ ರಿಲ್ಯಾಕ್ಸ್‌ಮಾಡಿ ಕೆಲವು ಮುಖ್ಯ ವಿಚಾರಗಳನ್ನು ಚರ್ಚೆ ಮಾಡಲಿದ್ದಾರೆ. ಜೊತೆಗೆ, ಬಿಜೆಪಿ ಹಾಗೂ ಕಾಂಗ್ರೆಸ್‌ಪಕ್ಷಗಳೂ ಕೂಡ ಕುಮಾರಸ್ವಾಮಿ ನಡೆಯ ಬಗ್ಗೆ ಕಣ್ಣಿಟ್ಟಿವೆ.ಹೀಗಾಗಿ, ಫಲಿತಾಂಶ ಬರುವುದರೊಳಗೆ ಮೂರು ದಿನ ರಿಲ್ಯಾಕ್ಸ್‌ಮಾಡಲು ಹಾಗೂ ಅತಂತ್ರ ಸ್ಥಿತಿ ಬಂದರೆ ತಾವೇ ಅಧಿಕಾರಕ್ಕೆ ಬರುಬೇಕು ಎಂದು ಚರ್ಚೆ ನಡೆಸಲು ತಮ್ಮ ಆಪ್ತರೊಂದಿಗೆ ಸಿಂಗಾಪೂರ್​ಗೆ ತೆರಳಿದ್ದಾರೆ. ರಾಜ್ಯ ವಿಧಾನಸಭೆಯ ಫಲಿತಾಂಶ ಪ್ರಕಟವಾಗುವ ಮೇ 13ರ ಮಧ್ಯಾಹ್ನ ಬೆಂಗಳೂರಿಗೆ ವಾಪಸ್‌ಬರಲಿದ್ದಾರೆ ಎಂದು ತಿಳಿದುಬಂದಿದೆ. ರಾಜ್ಯ ಹಾಗೂ ದೇಶದಲ್ಲಿ ವಿವಿಧ ಖಾಸಗಿ ಸಂಸ್ಥೆಗಳಿಂದ ಮತದಾನೋತ್ತರ ಸಮೀಕ್ಷೆಗಳು ಹೊರ ಬಿದ್ದಿದ್ದು, ಅದರಲ್ಲಿ ಜೆಡಿಎಸ್‌30 ಸ್ಥಾನಗಳನ್ನು ದಾಟುವುದಿಲ್ಲ ಎಂದು ಹೇಳಲಾಗುತ್ತಿದೆ. ಆದರೆ, ಅತಂತ್ರ ಸ್ಥಿತಿ ಬರಲಿದ್ದು, ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಗುವುದಿಲ್ಲ ಎಂಬ ಮಾಹಿತಿ ಹೊರಬಿದ್ದಿದೆ. ಈ ಹಿನ್ನೆಲೆಯಲ್ಲಿ ಅತಂತ್ರ ಸ್ಥಿತಿ ಬಂದಲ್ಲಿ ಯಾರೊಂದಿಗೆ ಕೈ ಜೋಡಿಸಬೇಕು ಎಂಬುದನ್ನು ಕೂಡ ಸಿಂಗಾಪುರದಲ್ಲಿ ಚರ್ಚೆ ಮಾಡಲಿದ್ದಾರೆ.

Leave a Reply

Your email address will not be published. Required fields are marked *