ಅಧಿಕಾರದಲ್ಲಿದ್ದಾಗ ರೈತರ ಕೃಷಿ ಪಂಪ್ ಸೆಟ್‍ಗಳಿಗೆ ಸಂಪರ್ಕ ನೀಡದೇ ಸತಾಯಿಸಿದವರು ಈಗ 200 ಯುನಿಟ್‍ವರೆಗೆ ಉಚಿತ ವಿದ್ಯುತ್ ನೀಡುತ್ತೇವೆ ಎಂದು ಡಂಗುರ ಸಾರುತ್ತಿದ್ದಾರೆ. ಇದು ಈ ಶತಮಾನದ ಅತಿದೊಡ್ಡ ಸುಳ್ಳಾಗಬಹುದು ಎಂದು ಕಾಂಗ್ರೆಸ್ ವಿರುದ್ಧ ಇಂಧನ ಹಾಗೂ ಕನ್ನಡ ಸಂಸ್ಕೃತಿ ಸಚಿವ ವಿ.ಸುನಿಲ್ ಕುಮಾರ್ ವ್ಯಂಗ್ಯವಾಡಿದ್ದಾರೆ.ತಾವು ಮುಖ್ಯಮಂತ್ರಿಯಾಗಿದ್ದಾಗ ಕತ್ತಲೆಯಲ್ಲಿ ಬಜೆಟ್ ಓದಿದ್ದನ್ನು ಸಿದ್ದರಾಮಯ್ಯ ಮರೆತಿರಬೇಕು. ನೀವು ಅಧಿಕಾರದಲ್ಲಿದ್ದಾಗ ಎಸ್ಕಾಂಗಳನ್ನು ನಷ್ಟಕ್ಕೆ ದೂಡಿದ್ದಿರಿ. ಆದರೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ 9,000 ಕೋಟಿ ರೂ.ನ್ನು ಎಸ್ಕಾಂಗಳಿಗೆ ನೀಡಿ ನೀವು ಮಾಡಿದ್ದ ಆಡಳಿತ ವೈಫಲ್ಯ ಸರಿಪಡಿಸಿದ್ದೇವೆ. ಮತಕ್ಕಾಗಿ ಇಂಧನ ಇಲಾಖೆ ಮಾರಾಟ ಮಾಡಬೇಡಿ. ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ 2016 ರಿಂದ ಇಲ್ಲಿಯವರೆಗಿನ ಹಿಂಬಾಕಿಯೂ ಸೇರಿ 18 ಸಾವಿರ ಕೋಟಿ ರೂ. ಸಬ್ಸಿಡಿ ಹಣವನ್ನು ಎಸ್ಕಾಂಗಳಿಗೆ ನೀಡಿದ್ದೇವೆ. ಇಲಾಖೆಯನ್ನು ಇಷ್ಟು ದೊಡ್ಡ ಪ್ರಮಾಣದಲ್ಲಿ ಹಳ್ಳ ಹಿಡಿಸಿದ್ದ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಜೋಡಿ ಈಗ ಉಚಿತ ವಿದ್ಯುತ್ ಎಂಬ ಸುಳ್ಳು ಭರವಸೆ ನೀಡುತ್ತಿದ್ದಾರೆ. ದುರಾಡಳಿತ ಹಗರಣದ ಮೂಲಕ ಇಂಧನ ಇಲಾಖೆಯನ್ನು ನಷ್ಟಕ್ಕೆ ದೂಡಿದ್ದೇ ನಿಮ್ಮ ಸರ್ಕಾರದ ಮಹತ್ ಸಾಧನೆ ಎಂದು ಸುನೀಲ್ ಕುಮಾರ್ ಟೀಕಿಸಿದ್ದಾರೆ.