ನಟ ಕಿಚ್ಚ ಸುದೀಪ್ ಅವರ ಖಾಸಗಿ ವಿಡಿಯೋ ಬಹಿರಂಗ ಪಡಿಸುವುದಾಗಿ ಬರೆದ ಬೆದರಿಕೆ ಪತ್ರದ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಈ ಪ್ರಕರಣದ ಹಿಂದೆ ಯಾರಿದ್ದಾರೆ ಎಂಬುದು ನನಗೆ ಗೊತ್ತಿದೆ ಎಂದು ನಿನ್ನೆಯಷ್ಟೇ ಸುದೀಪ್ಹೇಳಿದ್ದರು. ಸಿನಿಮಾ ರಂಗದವರೇ ಈ ಪ್ರಕರಣದಲ್ಲಿ ಭಾಗಿಯಾಗಿದ್ದು, ಕಾನೂನು ಮೂಲಕವೇ ಅವರಿಗೆ ಉತ್ತರ ಕೊಡುತ್ತೇನೆ ಎಂದೂ ಹೇಳಿಕೊಂಡಿದ್ದರು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಮಹತ್ವದ ಸುಳಿವು ಸಿಕ್ಕಿದೆ. ಸುದೀಪ್ ಮನೆಗೆ ಬಂದಿದ್ದ ಆ ಎರಡೂ ಬೆದರಿಕೆ ಪತ್ರಗಳು ದೊಮ್ಮಲೂರಿನಿಂದ ಪೋಸ್ಟ್ ಆಗಿವೆ ಎಂದು ಹೇಳಲಾಗುತ್ತಿದೆ. ಆ ಬೆದರಿಕೆ ಪತ್ರಗಳ ಸಂಬಂಧ ಸಿಸಿಬಿಯಿಂದ ತನಿಖೆ ಶುರುವಾಗಿದ್ದು, ಶಂಕೀತ ಜಾಡು ಹಿಡಿದು ಹೊರಟಿದ್ದಾರಂತೆ ಸಿಸಿಬಿ ಅಧಿಕಾರಿಗಳು.ಈಗಾಗಲೆ ದೂರು ದಾಖಲಿಸಿ ತನಿಖೆ ನಡೆಸಿದ್ದ ಪುಟ್ಟೇನಹಳ್ಳಿ ಪೊಲೀಸರು ಸುದೀಪ್ ಮನೆಯಲ್ಲಿ ಸ್ಪಾಟ್ ಇನ್ವೆಷ್ಟಿಗೇಷನ್ ಕೂಡ ನಡೆಸಿದ್ದಾರೆ. ಕೆಲವೊಂದು ಸಾಂದರ್ಭಿಕ ಸಾಕ್ಷಿಗಳ ಅನ್ವಯ ಈ ಹಿಂದೆ ಇದ್ದ ಸುದೀಪ್ ಮನೆಯ ಕಾರು ಚಾಲಕನ ಮೇಲೆ ಅನುಮಾನ ಬಂದಿದೆ ಎಂದು ಹೇಳಲಾಗುತ್ತಿದೆ. ಇವೆಲ್ಲ ವರದಿಯನ್ನು ಪುಟ್ಟೇನಹಳ್ಳಿ ಪೊಲೀಸರು ಸಿಸಿಬಿಗೆ ನೀಡಿದ್ದಾರೆ. ಇನ್ನು ಈ ಕಾರು ಚಾಲಕನನ್ನು ಬಳಸಿಕೊಂಡು ಚಿತ್ರ ರಂಗದ ಆ ವ್ಯಕ್ತಿ ಕೃತ್ಯವನ್ನು ಎಸಗಿದ್ದನಾ ಎಂಬ ಶಂಕೆ ವ್ಯಕ್ತವಾಗಿದೆ. ಇದೊಂದು ಪ್ರೀ ಪ್ಲಾನ್ ಕೃತ್ಯ ಎಂಬುದಕ್ಕೆ ಸಿಸ್ಟಂ ಟೈಪಿಂಗ್ ಪತ್ರವೇ ಸಾಕ್ಷಿಯಾಗಿದೆ. ಕೈ ಬರಹ ಪತ್ರವನ್ನು ಕಳಿಸಿದರೆ ಸಾಕ್ಷಿ ಸಿಗುತ್ತೆ ಎಂಬ ಕಾರಣಕ್ಕೆ ಟೈಪ್ ಮಾಡಿ ಆ ಪತ್ರವನ್ನು ಪೋಸ್ಟ್ ಮಾಡಲಾಗಿದೆ. ಪೊಲೀಸರು ದೂರು ಪಡೆದುಕೊಳ್ಳುವಾಗಲೇ ಇದೊಂದು ಕ್ರಿಮಿನಲ್ ಕಾನ್ಸ್ ಪೆರೆಸಿ ಎಂದು ತಿಳಿದು ಸೆಕ್ಷನ್ 120b ಒಳಸಂಚು ಅಡಿಯಲ್ಲಿ ಕೇಸು ದಾಖಲಿಸಿದ್ದರು. ಸದ್ಯ ಅವರ ಅನುಮಾನ ಕೂಡ ನಿಜವಾಗ್ತಿದೆ ಎಂಬುದಕ್ಕೆ ಸಿಸಿಬಿಗೆ ಸಿಕ್ಕ ಬೇಸಿಕ್ ಇನ್ಪಾರ್ಮೇಷನ್ ಗಳೆ ಸಾಕ್ಷಿಯಾಗಿವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿಯ ಸೈಬರ್ ವಿಂಗ್ ಕೂಡ ಕೆಲಸ ಮಾಡುತ್ತಿದ್ದು ಮುಂದಿನ ದಿನದಲ್ಲಿ ನಟ ಸುದೀಪ್ ಗೂ ನೊಟೀಸ್ ನೀಡಿ ಹೇಳಿಕೆಗಳನ್ನು ಪಡೆಯಲು ಸಿದ್ಧತೆಯನ್ನ ನಡೆಸುತ್ತಿದ್ದಾರೆ. ಸದ್ಯ ಆ ಕಾರು ಚಾಲಕ ಸಿಕ್ಕ ಬಳಿಕವಷ್ಟೇ ಅಸಲಿ ಸಂಗತಿ ಹೊರ ಬರಬೇಕಿದೆ