ರಾಷ್ಟ್ರೀಯ ಸೈನಿಕ ಸ್ಮಾರಕ ಮ್ಯಾನೇಜ್‌ಮೆಂಟ್ ಟ್ರಸ್ಟ್ ಆಯೋಜಿಸಿದ್ದ ವಿಜಯ ದಿವಸ ಸಮಾರಂಭವನ್ನು ಉದ್ಘಾಟನೆ ಮಾಡಿ ಬಳಿಕ ಮಾತನಾಡಿದ ಸಿಎಂ, ಭಾರತ ಸ್ವಾತಂತ್ರ‍್ಯ ಪೂರ್ವ ಹಾಗೂ ನಂತರದಲ್ಲಿ ಬಾಂಗ್ಲಾ ವಿಮೋಚನೆ, ಕಾರ್ಗಿಲ್ ಸೇರಿದಂತೆ ಅನೇಕ ಯುದ್ಧಗಳಲ್ಲಿ ಕರ್ನಾಟಕದ ಯೋಧರು ತಮ್ಮ ಪ್ರಾಣ ತ್ಯಾಗ ಮಾಡಿ ಭಾರತಕ್ಕೆ ವಿಜಯ ತಂದುಕೊಟ್ಟಿದ್ದಾರೆ. ಅದರ ಸ್ಮರಣಾರ್ಥವಾಗಿ ವಿಜಯ ದಿವಸ ಆಚರಣೆ ಮಾಡಲಾಗುತ್ತದೆ. ರಕ್ಷಣಾ ಪಡೆಗಳ ಸೇವೆ ಅತ್ಯಂತ ಶ್ರೇಷ್ಠ ಸೇವೆ. ಅಲ್ಲಿಗೆ ಸೇರುವ ಮುನ್ನವೇ ಎಲ್ಲಾ ತ್ಯಾಗಕ್ಕೂ ಸಿದ್ದರಾಗಿರಬೇಕು. ದೇಶದ ರಕ್ಷಣೆ ಹಾಗೂ ಅದರ ಜನರಿಗಾಗಿ ಪ್ರಾಣ ತ್ಯಾಗ ಮಾಡುವ ಮೂಲಕ ದೇಶಕ್ಕೆ ವಿಜಯ ಪ್ರಾಪ್ತಿಯಾಗಿದ್ದನ್ನೂ ನೋಡಲು ಅವರಿರುವುದಿಲ್ಲ. ಮಾನವೀಯತೆಯ ಅತ್ಯಂತ ಶ್ರೇಷ್ಠ ಗುಣವನ್ನು ಹೊಂದಿರುವ ಸೇವೆ ಇದು. ರಕ್ಷಣಾ ಪಡೆಗಳಿಂದಾಗಿ ನಮ್ಮ ದೇಶ ಸುರಕ್ಷಿತವಾಗಿದ್ದು, ಸಾಮಾನ್ಯ ನಾಗರಿಕರು ಶಾಂತಿಯಿಂದಿರಲು ಸಾಧ್ಯವಾಗಿದೆ. ನಾವು ಪ್ರಗತಿಯತ್ತ ಸಾಗಬೇಕು. ನಾಗರಿಕರಾಗಿ ದೇಶವಾಸಿಗಳಿಗೆ ಉತ್ತಮ ಜೀವನ ನೀಡುವ ಹೊಣೆಗಾರಿಕೆ ನಮ್ಮ ಮೇಲಿದೆ ಎಂದು ತಿಳಿಸಿದರು.