ಸೊಳ್ಳೆ ಔಷಧಿ ಸಿಂಪಡಿಸಿದ ಬಿಲ್ ಕೇಳಿದ್ರೆ ಬಿಬಿಎಂಪಿ ಅಧಿಕಾರಿಗಳು ದರ್ಪ ಪ್ರದರ್ಶಿಸಿರುವ ಆರೋಪ ಕೇಳಿಬಂದಿದೆ. ಟೆಂಡರ್ ಕೂಗೋದು, ಟೆಂಡರ್ ಆದ್ಮೇಲೆ ಬಿಲ್ ಬಾಕಿ ವಿಚಾರಗಳು ಆಗಾಗ ಬಿಬಿಎಂಪಿಯಲ್ಲಿ ಸದ್ದು ಮಾಡುತ್ತಲೇ ಇರುತ್ತವೆ. ಈಗ ಬಿಬಿಎಂಪಿ ಸೊಳ್ಳೆ ಔಷಧಿ ಸಿಂಪಡಿಸಿದ ಬಿಲ್‍ಗಾಗಿ ಗಲಾಟೆಯಾಗಿದೆ. ದಯಮಾಡಿ ಹಣ ಬಿಡುಗಡೆ ಮಾಡಿ ಅಂದ್ರೆ ಅಧಿಕಾರಿ ನಮ್ಮ ಮೇಲೆ ದೌರ್ಜನ್ಯ ಮಾಡಿದ್ದಾರೆ ಎಂಬ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಸಿಬ್ಬಂದಿ ದೂರು ದಾಖಲಿಸಿದ್ದು,ಬಿಬಿಎಂಪಿ ಸೊಳ್ಳೆ ಔಷಧಿ ಸಿಂಪಡಿಸಿದ ಬಿಲ್‍ಗಾಗಿ ಆಗ್ರಹಿಸಿದಾಗ ನಮ್ಮ ಮೇಲೆ ಮ್ಯಾನ್ ಹ್ಯಾಂಡ್ಲಿಂಗ್ ಮಾಡಿಸುವುದರ ಮೂಲಕ ಬಿಬಿಎಂಪಿ ಸ್ಪೆಷಲ್ ಕಮಿಷನರ್ ಜಯರಾಂ ರಾಯ್ಪುರ ದೌರ್ಜನ್ಯ ಮಾಡಿದ್ದಾರೆ. ಕಳೆದ 2 ವರ್ಷಗಳಿಂದ 5 ಕೋಟಿ ಬಿಲ್ ಬಾಕಿಯನ್ನು ಬಿಬಿಎಂಪಿ ಉಳಿಸಿಕೊಂಡಿದೆ. ಈ ಬಿಲ್ ಕ್ಲಿಯರ್ ಮಾಡಲು ಮನವಿ ಮಾಡಿಕೊಳ್ಳಲು ಹೋದಾಗ ಸ್ಪೆಷಲ್ ಕಮಿಷನರ್ ಅನುಚಿತವಾಗಿ ವರ್ತನೆ ಮಾಡಿದ್ದಾರೆ ಎಂದು ದೂರು ದಾಖಲಿಸಿದ್ದಾರೆ. ಈ ಬಗ್ಗೆ ವಿಶೇಷ ಆಯುಕ್ತ ಜಯರಾಮ್ ರಾಯಪುರ ಮಾತನಾಡಿ, 198 ವಾರ್ಡ್‌ಗಳಿಗೆ ಟೆಂಡರ್ ಕರೆದಿದ್ದೇವೆ. ಈಗ ಹೊಸ ಟೆಂಡರ್ 243 ವಾರ್ಡ್‌ಗಳಿಗೆ ಕರೆಯುತ್ತೇವೆ. ಆದರೆ ಇವರು ಕೋರ್ಟಿನಲ್ಲಿ ಸ್ಟೇ ತಂದಿದ್ದಾರೆ. ಸ್ಟೇ ವೆಕೆಟ್ ಆಗಬೇಕು. ನಂತರವಷ್ಟೇ ಟೆಂಡರ್ ಕರೆಯುತ್ತೇವೆ. ನಾವು ಯಾರನ್ನೂ ತಪ್ಪಾಗಿ ನಡೆಸಿಕೊಂಡಿಲ್ಲ ಎಂದರು.