ಬಿಡಸಲಾಗದ ಕಗ್ಗಂಟಾಗಿದ್ದ ಕರ್ನಾಟಕ ಮುಖ್ಯಮಂತ್ರಿ ಸ್ಥಾನಕ್ಕೆ ನಿರೀಕ್ಷೆಯಂತೆ ಸೋನಿಯಾ ಗಾಂಧಿ ಹಸ್ತಕ್ಷೇಪದಿಂದ ಪರಿಹಾರ ಸಿಕ್ಕಿದ್ದು, 30-30 ತಿಂಗಳ ಅವಧಿಗೆ ಕಾಂಗ್ರೆಸ್ ಪ್ರಬಲ ನಾಯಕ, ಮಾಜಿ ಮುಖ್ಯಮಂತ್ರಿ, ವಿಧಾನಸಭಾ ಪ್ರತಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒಪ್ಪಿಕೊಂಡಿದ್ದಾರೆ. ತೃಪ್ತದಾಯಕ ಹೊಂದಾಣಿಕೆ ಎನ್ನದೇ ಹೋದರೂ ಉಭಯ ನಾಯಕರು ಈ ಸಂಧಾನ ಸೂತ್ರಕ್ಕೆ ಸಮ್ಮತಿಸಿದ್ದು ಭಾನುವಾರ (ಮೇ 20) ರಾಜ್ಯದ ಚುಕ್ಕಾಣಿ ಹಿಡಿಯಲಿದ್ದಾರೆ.ತಾವೇ ಸಿಎಂ ಆಗಬೇಕು, ಅಧಿಕಾರ ಹಂಚಿಕೆಯಾದರೂ ಮೊದಲ ಅವಧಿಯಲ್ಲಿಯೇ ಅಧಿಕಾರ ಸಿಗಬೇಕೆಂದು ಬಿಗಿಪಟ್ಟು ಹಿಡಿದ ಶಿವಕುಮಾರ್ ಅವರ ಮನವೊಲಿಸಲು ರಾಹುಲ್ ಗಾಂಧಿ ಸೇರಿ ಹೈಕಮಾಂಡ್‌ನ ಎಲ್ಲ ನಾಯಕರೂ ಹರಸಾಹಸ ನಡೆಸಿದ್ದರು. ಒಂದು ಹಂತದಲ್ಲಿ ಪ್ರಿಯಾಂಕಾ ಗಾಂಧಿ ಕೂಡ ರಂಗ ಪ್ರವೇಶ ಮಾಡಿ, ಶಿವಕುಮಾರ್ ಅವರನ್ನು ಓಲೈಸಲು ಯತ್ನಿಸಿದ್ದರು. ಆದರೆ, ಇದ್ಯಾವುದಕ್ಕೂ ಬಗ್ಗದ ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ಹುದ್ದೆಯನ್ನು ವಹಿಸಿಕೊಂಡು ಪಕ್ಷವನ್ನು ಅಧಿಕಾರಕ್ಕೆ ತರುವ ಹೊಣೆಯನ್ನು ನನಗೆ ನೀಡಿದ್ದ ಸೋನಿಯಾ ಗಾಂಧಿ ಅವರ ಜತೆ ಚರ್ಚಿಸದೆ ಯಾವುದೇ ತೀರ್ಮಾನ ಕೈಗೊಳ್ಳುವುದಿಲ್ಲ ಎಂದು ವರಿಷ್ಠರಿಗೆ ತಿಳಿಸಿದರು. ಹೀಗಾಗಿ, ಇದೀಗ ಸೋನಿಯಾ ರಂಗ ಪ್ರವೇಶ ಮಾಡುವುದು ಅನಿವಾರ್ಯವಾಗಿತ್ತು.ಸೋನಿಯಾ ಇಬ್ಬರನ್ನೂ ಕನ್ವೀನ್ಸ್ ಮಾಡುವಲ್ಲಿ ಸಫಲ. ಗಾಂಧಿ ಕುಟುಂಬಕ್ಕೆ ಸದಾ ನಿಷ್ಠರಾಗಿದ್ದು, ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ತರಲು, ರಾಷ್ಟ್ರದಲ್ಲಿಯೇ ಪಕ್ಷಕ್ಕೆ ಭರವಸೆ ಮಾಡುವಂತೆ ಮಾಡಿದ ಕರ್ನಾಟಕ ಚುನಾವಣೆ ಫಲಿತಾಂಶದಲ್ಲಿ ಡಿ.ಕೆ.ಶಿವಕುಮಾರ್ ಕಾಣಿಕೆ ಇರುವುದು ಸುಳ್ಳಲ್ಲ. ಅದಕ್ಕೆ ಸರಿಯಾಗಿ ಎರಡನೇ ಅವಧಿಯಲ್ಲಿ ಡಿಕೆಶಿಯನ್ನು ಸಿಎಂ ಮಾಡುವುದಾಗಿ ಹೇಳುವುದಲ್ಲದೇ, ಕೆಲವು ಶರತ್ತುಗಳನ್ನು ಈಡೇರಿಸುವ ಭರವಸೆಯನ್ನು ಸೋನಿಯಾ ಕರೆ ಮಾಡಿ ನೀಡಿದ್ದರಿಂದ ಶಿವಕುಮಾರ್ ಸಂಧಾನ ಸೂತ್ರಕ್ಕೆ ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗಿದೆ.