ಹಾಸನ ತಾಲೂಕಿನ ಸಾಲಗಾಮೆ ಹೋಬಳಿ ಕಕ್ಕೇಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಅಣ್ಣಪ್ಪ ಸ್ವಾಮಿ ದೇವಾಲಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿರುವ ಜಿ.ಪಂ.ಮಾಜಿ ಸದಸ್ಯೆ ಭವಾನಿ ರೇವಣ್ಣ ಅವರು, ಜೆಡಿಎಸ್ನಿಂದ ನನ್ನನ್ನು ಅಭ್ಯರ್ಥಿ ಮಾಡಬೇಕು ಎಂದು ಎಲ್ಲರೂ ಮಾತನಾಡಿಕೊಂಡು ನಿರ್ಣಯ ತೆಗೆದುಕೊಂಡಿದ್ದಾರೆ. ಸ್ಪಲ್ಪ ದಿನಗಳಲ್ಲೇ ನನ್ನ ಹೆಸರು ಘೋಷಣೆಯಾಗಲಿದೆ. ಜನರ ಪರಿಚಯ ಇದ್ದರೆ, ಊರಿನ ಪರಿಚಯ ಆಗುತ್ತದೆ. ಅದಕ್ಕಾಗಿ ಕ್ಷೇತ್ರ ಪ್ರವಾಸ ಮಾಡುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಕ್ಷೇತ್ರದ ಜನರ ಕೆಲಸ ಮಾಡಲು, ಭಗವಂತ ನನಗೆ ಆಶೀರ್ವಾದ ಮಾಡಲಿ ಎಂದು ಬೇಡುವೆ. ಮತ್ತೊಮ್ಮೆ ಈ ಊರಿಗೆ ಬರುವೆ, ಕಳೆದ ಬಾರಿ ಹಾಸನ ವಿಧಾನಸಭಾ ಕ್ಷೇತ್ರ ನಮ್ಮ ಕೈತಪ್ಪಿ ಹೋಗಿದ್ದರಿಂದ ಅನೇಕ ಕೆಲಸ ಕಾರ್ಯಗಳು ಹಾಗೆಯೇ ಉಳಿದಿವೆ. ಅವುಗಳನ್ನು ಪೂರ್ಣಗೊಳಿಸಬೇಕಿದೆ. ನಿಮ್ಮನ್ನು ಮತ್ತೆ ಭೇಟಿ ಮಾಡುವೆ ಎಂದು ಸ್ಥಳೀಯರಿಗೆ ಭರವಸೆ ನೀಡಿದ್ದಾರೆ. ಚುನಾವಣೆಯಲ್ಲಿ ನನಗೆ ಆಶೀರ್ವಾದ ಮಾಡಿ ಎಂದು ಪರೋಕ್ಷವಾಗಿ ಹೇಳಿದ್ದಾರೆ.