ಹುಬ್ಬಳ್ಳಿಯಲ್ಲಿ ವಿಶ್ವದ ಅತಿ ಉದ್ದದ ರೈಲ್ವೆ ಪ್ಲಾಟ್‌ಫಾರ್ಮ್ ಶ್ರೀ ಸಿದ್ದಾರೂಢ ಸ್ವಾಮಿ ರೈಲ್ವೆ ಪ್ಲಾಟ್‌ಫಾರ್ಮ್ ಜನವರಿ 2023 ವೇಳೆಗೆ ಉದ್ಘಾಟನೆಗೊಳ್ಳಲಿದೆ. ಪ್ಲಾಟ್‌ಫಾರ್ಮ್ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ. ಇದಕ್ಕಾಗಿ ಜನವರಿಯಲ್ಲಿ ಪ್ರಧಾನಿ ಮೋದಿ ಕರ್ನಾಟಕಕ್ಕೆ ಆಗಮಿಸಲಿದ್ದಾರೆ. ಈ ವಾಣಿಜ್ಯ ನಗರಿ ರೈಲು ನಿಲ್ದಾಣ ವಿಶ್ವದಲ್ಲೇ ಅತಿ ಉದ್ದದ ರೈಲ್ವೆ ಪ್ಲಾಟ್ ಫಾರ್ಮ್ ಹೊಂದಿರುವ ಹೆಗ್ಗಳಿಕೆಗೆ ಭಾಜನವಾಗಲಿದೆ.ಈಗಿರುವ ಪ್ಲಾಟ್ ಫಾರ್ಮ್ ನಂ1 550 ಮೀಟರ್ ಉದ್ದವಿದ್ದು, ಅದನ್ನು 1,400 ಮೀಟರ್‌ಗೆ ಹೆಚ್ಚಿಸಲಾಗಿದೆ. ಇದನ್ನು ಹತ್ತು ಮೀಟರ್ ಅಗಲ ಮಾಡಲಾಗಿದೆ. ಈಗಿನ ತಪಾಸಣಾ ಕ್ಯಾರೇಜ್ ಮಾರ್ಗವನ್ನು ಪೂರ್ಣ ಪ್ಲಾಟ್ ಫಾರ್ಮ್ ಆಗಿ ಪರಿವರ್ತಿಸಲಾಗಿದೆ. ಈಗಾಗಲೇ ಕಾಮಗಾರಿ ಪೂರ್ಣಗೊಂಡಿದೆ. ಈಶಾನ್ಯ ರೈಲ್ವೆಯ ಪ್ರಧಾನ ಕಚೇರಿ ಹೊಂದಿರುವ ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ 1,366 ಮೀಟರ್ ಉದ್ದದ ಪ್ಲಾಟ್‌ಫಾರ್ಮ್ ಇದೆ. ಇದು ಸದ್ಯಕ್ಕೆ ವಿಶ್ವದ ಅತಿ ಉದ್ದದ ಪ್ಲಾಟ್‌ಫಾರ್ಮ್ ಎನ್ನುವ ಹೆಗ್ಗಳಿಕೆ ಹೊಂದಿದೆ. ಇದನ್ನೂ ಮೀರಿಸುವ ಉದ್ದನೆಯ ಪ್ಲಾಟ್‌ಫಾರ್ಮ್ ಹುಬ್ಬಳ್ಳಿಯಲ್ಲಿ ನಿರ್ಮಾಣಗೊಂಡಿದೆ.