ಇಟಲಿಯ ವೆನಿಸ್ನಲ್ಲಿ ಮಂಗಳವಾರ ಭಾರಿ ಅಪಘಾತ ಸಂಭವಿಸಿದ್ದು, ಬಸ್ ನಿಯಂತ್ರಣ ತಪ್ಪಿ ಸೇತುವೆಯಿಂದ ಕೆಳಗೆ ಬಿದ್ದಿದೆ. ಈ ಘಟನೆಯಲ್ಲಿ 21 ಜನರು ಸಾವನ್ನಪ್ಪಿದ್ದು, ಹೆಚ್ಚಿನ ಸಂಖ್ಯೆಯ ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.ಮಾಧ್ಯಮ ವರದಿಗಳ ಪ್ರಕಾರ, ಬಸ್ ಮೀಥೇನ್ ಅನಿಲದಿಂದ ಚಲಿಸುತ್ತಿತ್ತು. ಆದ್ದರಿಂದ ಸೇತುವೆಯಿಂದ ಬಿದ್ದ ತಕ್ಷಣ ಬೆಂಕಿ ಹೊತ್ತಿಕೊಂಡಿದೆ. ಸತ್ತವರು ಮತ್ತು ಗಾಯಗೊಂಡವರಲ್ಲಿ ಇಟಾಲಿಯನ್ನರು ಮಾತ್ರವಲ್ಲದೆ ಅನೇಕ ದೇಶಗಳ ಜನರು ಇದ್ದರು ಎಂದು ತಿಳಿದು ಬಂದಿದೆ. ಘಟನೆಯ ಹಲವು ವಿಡಿಯೋಗಳು ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.ಘಟನೆಯ ಬಗ್ಗೆ ದುಃಖ ವ್ಯಕ್ತಪಡಿಸಿದ ಮೇಯರ್ ಲುಯಿಗಿ ಬ್ರುಗ್ನಾರೊ ಅವರು ಫೇಸ್ಬುಕ್ನಲ್ಲಿ ಹೀಗೆ ಬರೆದಿದ್ದಾರೆ- ಇಂದು ಸಂಜೆ ಭಾರಿ ದುರಂತ ಸಂಭವಿಸಿದೆ. ಇದೊಂದು ಭಯಾನಕ ಹಾಗೂ ನೋವಿನ ಘಟನೆಯಾಗಿದೆ. ಇನ್ನೂ ಈ ಬಗ್ಗೆ ವೆನಿಸ್ ಪ್ರಾಂತ್ಯದ ಗವರ್ನರ್ ಲುಕಾ ಜಿಯಾ ಅವರು, ಈ ಘಟನೆಯಲ್ಲಿ 21 ಜನರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು 20 ಕ್ಕೂ ಹೆಚ್ಚು ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸ್ಥಳೀಯ ಸುದ್ದಿವಾಹಿನಿಗಳಿಗೆ ದೃಢಪಡಿಸಿದ್ದಾರೆ.