ದೆಹಲಿಯ ಜಂತರ್ ಮಂತರ್ನಲ್ಲಿ ರಾಜ್ಯದ ವಿವಿಧ ಭಾಗದಿಂದ ಸೇರಿದ ನೂರಾರು ಕಾರ್ಯಕರ್ತರು ಅಧ್ಯಕ್ಷ ನಾರಾಯಣಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿದರು. ಪ್ರತಿಭಟನೆಗೂ ಮುನ್ನ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನಿವಾಸದಲ್ಲಿ ಸಭೆ ನಡೆಸಿದ ನಾರಾಯಣಗೌಡ ಕೇಂದ್ರ ಸರ್ಕಾರದ ಮಧ್ಯಪ್ರವೇಶದ ಬಗ್ಗೆ ಚರ್ಚೆ ನಡೆಸಿದರು. ಈ ಸಭೆಯಲ್ಲಿ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಕೂಡಾ ಭಾಗಿಯಾಗಿದ್ದರು. ಕರ್ನಾಟಕ ತಮಿಳುನಾಡು ಒಟ್ಟಾಗಿ ಬಂದಲ್ಲಿ ಮೇಕೆದಾಟು ಯೋಜನೆಗೆ ಅನುಮತಿ ಭರವಸೆ ನೀಡಿದರು.ಪ್ರತಿಭಟನೆ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಇಂದು ಕಾವೇರಿಗಾಗಿ ಕರ್ನಾಟಕದಿಂದ ದೆಹಲಿಗೆ ಬಂದಿದ್ದೇವೆ. ರಾಜ್ಯದ ಎಲ್ಲ ಜಿಲ್ಲೆಯಿಂದ ನಮ್ಮ ಕಾರ್ಯಕರ್ತರು ಬಂದಿದ್ದಾರೆ. ನಾನು ಇವತ್ತಿನ ನೀರಿನ ಪರಿಸ್ಥಿತಿ, ಕಾವೇರಿ ಪರಿಸ್ಥಿತಿ ಮಾತಾಡೋಕೆ ಬಂದಿಲ್ಲ, ನಾನು ಪ್ರಧಾನ ಮಂತ್ರಿಗಳಿಗೆ, ಪ್ರಹ್ಲಾದ್ ಜೋಶಿ ಅವರಿಗೆ ಹಾಗೂ ನಮ್ಮ ನೀರಾವರಿ ಸಚಿವರ ಬಳಿ ಮಾತನಾಡಲು ಬಂದಿದ್ದೇನೆ.ನಮಗೆ ಸಂಕಷ್ಟ ಸೂತ್ರ ಬೇಕು ಅನ್ನೋದರ ಬಗ್ಗೆ ಮಾತಾಡಲು ಬಂದಿದ್ದೇನೆ. ನಮ್ಮ ಬಳಿ ನೀರು ಇದ್ದಾಗ ನಾವು ನೀರು ಕೊಡುತ್ತೇವೆ. ಕರ್ನಾಟಕ-ತಮಿಳುನಾಡು ಅಣ್ಣ-ತಮ್ಮ ತರ ಬದುಕ್ತಾ ಇದೆ. ನಾವು ನೀರು ಕೊಡ್ತೇವೆ. ಆದರೆ ನಮ್ಮ ಬಳಿ ನೀರು ಇಲ್ಲ ಅಂದಾಗ ಏನು ಮಾಡಬೇಕು? ಮಾನ್ಯ ಪ್ರಧಾನಮಂತ್ರಿಗಳು ಮಧ್ಯಸ್ಥಿಕೆ ವಹಿಸಿ, 4 ರಾಜ್ಯದ ಮುಖ್ಯಮಂತ್ರಿಗಳನ್ನು ಕರೆದು ಚರ್ಚೆ ಮಾಡಬೇಕು ಎಂದರು.