ಅರಮನೆ ಮೈದಾನದಲ್ಲಿ ನಡೆದ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಸಮ್ಮೇಳನದಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್, ಮುಂದಿನ 9 ವರ್ಷಗಳ ಕಾಲ ನಾವೇ ಅಧಿಕಾರದಲ್ಲಿ ಇರುತ್ತೇವೆ. ನಿಮ್ಮ ಸಮಸ್ಯೆಗಳನ್ನು ನಾವೇ ಬಗೆಹರಿಸುವುದು. ನಾವೇ ಪರಿಹಾರ ನೀಡುವುದು. ಈ ವಿಚಾರ ನೆನಪಿನಲ್ಲಿ ಇಟ್ಟುಕೊಳ್ಳಿ. ಗುತ್ತಿಗೆದಾರರಿಲ್ಲದೆ ಸರ್ಕಾರ ನಡೆಸಲು ಸಾಧ್ಯವಿಲ್ಲ. ನಾವು ಸರ್ಕಾರ ನಡೆಸುತ್ತೇವೆ, ನೀವು ಕಾಮಗಾರಿ ನಡೆಸುತ್ತೀರಿ. ಇದೆರಡೂ ದೇಶದ ಕೆಲಸಗಳು. ನೀವೆಲ್ಲ ರಾಜ್ಯದ ಅಭಿವೃದ್ಧಿಯ ಭಾಗಗಳು. ಹಿಂದಿನ ಸರ್ಕಾರ ಸರಿಯಾದ ಯೋಜನೆ ಮಾಡದೆ ನಿಮ್ಮ ಮೇಲೆ ಹೊರೆ ಹಾಕಿದೆ. ಗುತ್ತಿಗೆದಾರರಿಗೆ ಅಧಿಕಾರಿಗಳ ಮತ್ತು ರಾಜಕಾರಣಿಗಳ ಕಿರುಕುಳ ಇರುವುದು ನನ್ನ ಗಮನದಲ್ಲಿದೆ. ಗುತ್ತಿಗೆದಾರರು ರಾಜಕೀಯದಿಂದ ದೂರವಿರಬೇಕು. ನೀರಾವರಿ ಇಲಾಖೆಯ ಬಜೆಟ್ 16 ಸಾವಿರ ಕೋಟಿ ರೂ. ಇದೆ. ಕಳೆದ ಬಾರಿ 25 ಸಾವಿರ ಕೋಟಿ ರೂ. ಮೊತ್ತದ ಯೋಜನೆಗಳಿಗೆ ಅನುಮೋದನೆ ನೀಡಲಾಗಿತ್ತು. ಒಟ್ಟು ನನ್ನ ಇಲಾಖೆಯಲ್ಲಿ 1 ಲಕ್ಷ 25 ಸಾವಿರ ಕೋಟಿ ರೂ. ಮೊತ್ತದ ಕಾಮಗಾರಿಗಳು ನಡೆಯುತ್ತಿವೆ. ಹೀಗಿದ್ದಾಗ ಗುತ್ತಿಗೆದಾರರು ಕೆಲಸ ಮುಗಿಸುವುದು ಹೇಗೆ? ಸರ್ಕಾರ ಬಿಲ್ ಪಾವತಿ ಮಾಡುವುದು ಹೇಗೆ? ಈ ಸಮಸ್ಯೆಗಳನ್ನು ಬಗೆಹರಿಸಲು ಗಮನ ಹರಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ.