ಪಂಪ್ಸೆಟ್ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಆಗುತ್ತಿಲ್ಲ ಎಂದು ಆರೋಪಿಸಿ ಧಾರವಾಡ ತಾಲೂಕಿನ ನರೇಂದ್ರ ಗ್ರಾಮದ ರೈತರು ಬೆಳಗ್ಗೆ ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಬಳಿ ಇರುವ ವಿದ್ಯುತ್ ವಿತರಣಾ ಕೇಂದ್ರದ ಮುಂದೆ ಪ್ರತಿಭಟನೆ ನಡೆಸಿದರು.ನಂತರ ಮುಂದುವರಿದು ಅಯೋರಾತ್ರಿ ಸಹ ಧರಣಿ ನಡೆಸಿ ಸರ್ಕಾರ ಹಾಗೂ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಧರಣಿ ಕೈಬಿಡದ ರೈತರು ಅಹೋರಾತ್ರಿ ಧರಣಿಗೆ ಮುಂದಾಗಿದ್ದು, ಕೆಇಬಿ ಎದುರೇ ಅಡುಗೆ ಮಾಡಿ ಅಲ್ಲೇ ವಸತಿ ಮಾಡುವ ಮೂಲಕ ತಮ್ಮ ಬೇಡಿಕೆ ಈಡೇರಿಸಲು ಒತ್ತಾಯ ಮಾಡಿದರು.
ಮಳೆ ಇಲ್ಲದ ಸಂದರ್ಭದಲ್ಲಿ ಎಲ್ಲ ರೈತರು ಪಂಪ್ಸೆಟ್ ಮೂಲಕವೇ ನೀರು ಹಾಯಿಸುವ ಮೂಲಕ ಕೃಷಿ ಮಾಡುತ್ತಿದ್ದಾರೆ. ಆದರೆ, ಪಂಪ್ಸೆಟ್ಗಳಿಗೆ ಸಮರ್ಪಕವಾಗಿ ತ್ರಿಫೇಸ್ ವಿದ್ಯುತ್ ಪೂರೈಕೆ ಆಗುತ್ತಿಲ್ಲ. ಈ ಹಿಂದೆ 7 ತಾಸು ವಿದ್ಯುತ್ ವಿತರಣೆಯಾಗುತ್ತಿತ್ತು. ಈಗ ಕೇವಲ 3 ತಾಸು ಮಾತ್ರ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ಇಷ್ಟು ಅವಧಿಯ ವಿದ್ಯುತ್ ಸಾಕಾಗುತ್ತಿಲ್ಲ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.