ಮಂಡ್ಯ ಜಿಲ್ಲೆಯಲ್ಲಿ ರೈತರು ಕಬ್ಬು ಮತ್ತು ಭತ್ತವನ್ನು ಬೆಳೆಯುತ್ತಾ ಬಂದಿದ್ದಾರೆ. ಇದೆರಡು ಬೆಳೆಯನ್ನು ಬೆಳೆಯ ಬೇಕಾದರೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬೇಕಾಗುತ್ತದೆ. ಈ ಬಾರಿ ಮಳೆಯ ಕೊರೆತೆಯಿಂದಾಗಿ ಬೆಳೆ ಬೆಳೆಯುವುದು ಕಷ್ಟವಾಗಿದೆ.
ಇಂತಹ ಸಂದರ್ಭದಲ್ಲಿ ಬಹುತೇಕ ರೈತರು ನೀರಿಲ್ಲದ ಕಾರಣದಿಂದ ಬೆಳೆ ಬೆಳೆಯಲಾಗದೆ ಆಕಾಶ ನೋಡುವಂತಾಗಿದೆ. ಆದರೆ ಕೆ.ಆರ್.ಪೇಟೆ ತಾಲೂಕಿನ ವಿಠಲಾಪುರದ ಪ್ರಗತಿಪರ ರೈತ ಸುಬ್ಬೇಗೌಡರು ಮಾತ್ರ ಭಿನ್ನವಾಗಿದ್ದಾರೆ. ಇದಕ್ಕೆ ಕಾರಣವೂ ಇದೆ. ಅವರು ಕಬ್ಬು, ಭತ್ತಕ್ಕೆ ಜೋತು ಬೀಳದೆ ವಾಣಿಜ್ಯ ಬೆಳೆಗಳತ್ತ ಮುಖ ಮಾಡಿ ಯಶಸ್ವಿಯಾಗಿದ್ದಾರೆ.ಸಾಮಾನ್ಯವಾಗಿ ವಾಣಿಜ್ಯ ಬೆಳೆಗಳು ಹೆಚ್ಚಿನ ಪ್ರಮಾಣದಲ್ಲಿ ನೀರು ಕೇಳುವುದಿಲ್ಲ, ಹೀಗಾಗಿ ಬರದ ಸಂದರ್ಭದಲ್ಲಿ ನಿಭಾಯಿಸಬಹುದಾಗಿದೆ. ಅಷ್ಟೇ ಅಲ್ಲದೆ ಒಂದು ವರ್ಷ ಫಸಲು ಸಿಗದಿದ್ದರೂ ಮತ್ತೊಂದು ವರ್ಷಕ್ಕೆ ಫಸಲು ಪಡೆಯಲು ಸಾಧ್ಯವಾಗುತ್ತದೆ. ಹೀಗಾಗಿಯೇ ಸುಬ್ಬೇಗೌಡರು ಮಲೆನಾಡಿನಲ್ಲಿ ಬೆಳೆಯುವ ಚಕ್ಕೆ. ಲವಂಗ, ಜಾಯಿಕಾಯಿ, ಏಲಕ್ಕಿ, ಕರಿಮೆಣಸು, ಜಾಪತ್ರೆ, ಕಾಫಿ ಸೇರಿದಂತೆ ಅಡಿಕೆ, ತೆಂಗು, ಸಪೋಟ, ಸೀಬೆ, ರೇಷ್ಮೆ, ನೇರಳೆ, ಪನ್ನೇರಳೆ, ಕೋಕೋ ಮುಂತಾದ ಬೆಳೆಗಳನ್ನು ಬೆಳೆಯುತ್ತಿದ್ದಾರೆ.ಈ ಬೆಳೆಯನ್ನು ಕೂಡ ನೈಸರ್ಗಿಕವಾಗಿ ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆಯುತ್ತಿರುವುದು ಖುಷಿಯ ವಿಚಾರವಾಗಿದೆ. ಇವರು ಮೇಲಿನ ಎಲ್ಲ ವಾಣಿಜ್ಯ ಬೆಳೆಗಳನ್ನು ಬೆಳೆಯುತ್ತಾ ಬಂದಿದ್ದು ಕೃಷಿಯಲ್ಲಿ ಲಾಭವನ್ನು ಪಡೆಯುತ್ತಿದ್ದಾರೆ.