ಮೈಸೂರಿನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ, ಮಾಜಿ ಸಚಿವ ವಿ ಸೋಮಣ್ಣ ಬಿಜೆಪಿಗೆ ಬರುವವರೆಗೆ ನಾನು ಸೋತೇ ಇರಲಿಲ್ಲ. ಬಿಜೆಪಿಗೆ ಬಂದ ಬಳಿಕ ನಾಲ್ಕು ಬಾರಿ ಸೋತೆ. ನಾನು ಏನೋ ಆಗಿಬಿಡುತ್ತೇನೆ ಎಂಬ ಭಯದಲ್ಲಿ ನನ್ನನ್ನು ಬಿಜೆಪಿಯಲ್ಲಿ ಸೋಲಿಸಲಾಗಿದೆ. ಈ ಹಿಂದೆ ಕಾಂಗ್ರೆಸ್ನಲ್ಲಿ ಸ್ಪರ್ಧಿಸಿ ಗೆದ್ದಿದ್ದೆ. ನಂತರ ಸ್ವತಂತ್ರ ಅಭ್ಯರ್ಥಿಯಾಗಿ ಎರಡು ಬಾರಿ ಗೆದ್ದಿದ್ದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಾನು ನಿಷ್ಠುರವಾಗಿ ಮಾತನಾಡುತ್ತೇನೆ. ಆದರಿಂದ ಏನಾಗಿದೆ ಎಂಬ ಬಗ್ಗೆ ಚರ್ಚೆ ಬೇಡ. ಕಷ್ಟಪಟ್ಟು ಬೆಂಗಳೂರಿನಲ್ಲಿ ಬೆಳೆದಿದ್ದೇನೆ. ನಾನು ಕೆಲಸಗಾರ ಎಂಬ ಭಾವನೆ ಇದೆ. ಈ ಹಿಂದೆ ತಮಿಳುನಾಡಿಗೆ ಹೋಗಿದ್ದಾಗ ಅಲ್ಲಿನ ಮಂತ್ರಿಯೊಬ್ಬರು ಗೋವಿಂದರಾಜನಗರ ಯಾಕೆ ಬಿಟ್ಟಿರಿ ಅಂದ್ರು. ನಾನು ಕ್ಷೇತ್ರ ಬಿಡಲಿಲ್ಲ, ನನ್ನನ್ನು ಬೇರೆ ಕ್ಷೇತ್ರಕ್ಕೆ ಕಳುಹಿಸಿದರು ಅಂದೆ. ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಕರುಣಾನಿಧಿ 10 ಬಾರಿ ಗೆದ್ದಿದ್ದಾರೆ. ಪ್ರತಿ ಬಾರಿಯೂ ಬೇರೆ ಬೇರೆ ಕ್ಷೇತ್ರಗಳಲ್ಲೇ ಗೆದ್ದಿದ್ದಾರೆ. ಅಂತೆಯೇ ಮುಂದೆ ನೀವೂ ಬೇರೆ ಬೇರೆ ಕ್ಷೇತ್ರಕ್ಕೆ ಹೋಗಿ, ಸೋಲಿನಿಂದ ಧೃತಿಗೆಡಬೇಡಿ ಎಂದು ಹೇಳಿ ನನ್ನನ್ನು ಬೇರೆ ಕ್ಷೇತ್ರಕ್ಕೆ ಕಳುಹಿಸಿದ್ದರು ಎಂದು ಹೇಳಿದರು. ಜಾತಿ ಗಣತಿ ಕುರಿತು ಮಾತನಾಡಿದ ಅವರು, ಕರ್ನಾಟಕದಲ್ಲಿ ಜಾತಿ ಗಣತಿ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದ್ದಾರೆ. ಜಾತಿ ಗಣತಿ ವರದಿ ನೋಡಿದರೆ ಅಚ್ಚರಿಯಾಗುತ್ತದೆ. ವೀರಶೈವ ಸಮಾಜ ಒಗ್ಗಟ್ಟಾಗಬೇಕು, ಇಲ್ಲದಿದ್ದರೆ ಹೇಳುವವರು, ಕೇಳುವವರು ಇಲ್ಲದಂತಾಗುತ್ತದೆ. ನಮ್ಮಲ್ಲಿ ಎಲ್ಲವೂ ಇದೆ. ಆದರೆ ಅವಕಾಶ ಬಂದಾಗ ಕಣ್ಮುಚ್ಚಿ ಕೂರುತ್ತೇವೆ ಎಂದು ಹೇಳಿದರು.