ರಾಜಸ್ಥಾನ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಭರ್ಜರಿ ಪ್ರಚಾರ ನಡೆಸುತ್ತಿದೆ. ಇದರ ನಡುವೆ ಎರಡು ಬಣಗಳು ಒಗ್ಗಟ್ಟಿನ ಪ್ರದರ್ಶನ ನೀಡಲು ಹೈಕಮಾಂಡ್ ಖಡಕ್ ಸೂಚನೆ ನೀಡಿದೆ. ಕಾಂಗ್ರೆಸ್ ಬಣಗಳ ಬಂಡಾಯ ಬಿಜೆಪಿಗೆ ನೆರವಾಗುವ ಸಾಧ್ಯತೆ ಅರಿತಿರುವ ಕಾಂಗ್ರೆಸ್ ಈ ಪ್ಲಾನ್ ಮಾಡಿದೆ. ಆದರೆ ಸಿಎಂ ಅಶೋಕ್ ಗೆಹ್ಲೋಟ್ ಇದೀಗ ಹೊಸ ರೀತಿಯಲ್ಲಿ ಸಚಿನ್ ಪೈಲೆಟ್ ಬಣಕ್ಕೆ ಟಾಂಗ್ ನೀಡಿದ್ದಾರೆ. ಮುಖ್ಯಮಂತ್ರಿ ಸ್ಥಾನ ತ್ಯಜಿಸಲು ನಾನು ಸಿದ್ದನಿದ್ದೇನೆ. ಆದರೆ ಏನು ಮಾಡಲಿ, ಸಿಎಂ ಕುರ್ಚಿ ನನ್ನನ್ನು ಸ್ಥಾನ ತ್ಯಜಿಸಲು ಬಿಡುತ್ತಿಲ್ಲ ಎಂದು ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡುತ್ತಿದ್ದ ವೇಳೆ ಅಶೋಕ್ ಗೆಹ್ಲೋಟ್ ಈ ಹೇಳಿಕೆ ನೀಡಿದ್ದಾರೆ. ಇದು ಕಾಂಗ್ರೆಸ್ನಲ್ಲಿ ತಳಮಳ ಸೃಷ್ಟಿಸಿದ್ದರೆ, ಇದೇ ಹೇಳಿಕೆ ಚುನಾವಣೆ ಸಮೀಪದಲ್ಲೇ ಭಾರಿ ಟ್ರೋಲ್ ಆಗುತ್ತಿದೆ. ನನಗೆ ಮಹಿಳೆಯೊಬ್ಬರು ಇತ್ತೀಚೆಗೆ ನೀವು 4ನೇ ಬಾರಿಗೆ ರಾಜಸ್ಥಾನ ಮುಖ್ಯಮಂತ್ರಿ ಆಗಬೇಕು ಎಂದು ಆಗ್ರಹಿಸಿದ್ದರು. ನಾನು ಮುಖ್ಯಮಂತ್ರಿ ಸ್ಥಾನವನ್ನೇ ತ್ಯಜಿಸಲು ಸಿದ್ಧನಿದ್ದೇನೆ. ಆದರೆ ಈ ಸ್ಥಾನ ನನ್ನನ್ನು ಸಿಎಂ ಹುದ್ದೆ ತ್ಯಜಿಸಲು ಬಿಡುತ್ತಿಲ್ಲ ಎಂದು ಮಹಿಳೆಗೆ ಉತ್ತರಿಸಿದ್ದೆ ಎಂದರು.ರಾಜಸ್ಥಾನ ಚುನಾವಣೆ ನವೆಂಬರ್ 25 ರಂದು ನಡೆಯಲಿದೆ. ಮೊದಲು ನವೆಂಬರ್ 23ಕ್ಕೆ ನಿಗದಿಪಡಿಸಲಾಗಿತ್ತು. ನ.23ರಂದು 1 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಮದುವೆಗಳು ಮತ್ತು ಸಾಮಾಜಿಕ ಕಾರ್ಯಕ್ರಮಗಳು ಇರುವುದರಿಂದ ಇದು ಚುನಾವಣೆ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಹೆಚ್ಚಿನ ಸಂಖ್ಯೆಯ ಜನ ಚುನಾವಣೆಯಲ್ಲಿ ಭಾಗವಹಿಸದೇ ಇರಬಹುದು ಎಂದು ರಾಜಕೀಯ ಪಕ್ಷಗಳು ಮನವಿ ಮಾಡಿದ ಕಾರಣ ದಿನಾಂಕವನ್ನು ಬದಲಾವಣೆ ಮಾಡಲಾಗಿದೆ.