ಕೊಪ್ಪಳ ತಾಲೂಕಿನ ಬಸಾಪುರ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ರಾಮ ಮಂದಿರ ಉದ್ಘಾಟನೆಗೆ ಯಾರಿಗೆಲ್ಲ ಆಹ್ವಾನ ಬಂದಿದೆ ಗೊತ್ತಿಲ್ಲ. ಆಹ್ವಾನ ಬಂದವರು ಹೋಗಲಿ. ರಾಮಮಂದಿರ ಉದ್ಘಾಟನೆಗೆ ರಾಜ್ಯ ಸರ್ಕಾರ ರಜೆ ಘೋಷಣೆಗೆ ಬಿಜೆಪಿ ಒತ್ತಾಯದ ಕುರಿತು ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ಇದು ಕೇಂದ್ರ ಸರ್ಕಾರದ ಕಾರ್ಯಕ್ರಮ. ಹೀಗಾಗಿ ಕೇಂದ್ರ ಸರ್ಕಾರ ರಜೆ ಘೋಷಣೆ ಮಾಡಲಿ. ನಾವು ಯಾಕೆ ರಜೆ ನೀಡಬೇಕು ಎಂದು ಹೇಳಿಕೆ ನೀಡಿದ್ದಾರೆ. ಇದೇ ವೇಳೇ ಬರಪರಿಹಾರದ ಕುರಿತು ಪ್ರತಿಕ್ರಿಯಿಸಿದ ಅವರು, ಬರದ ಹಿನ್ನೆಲೆ ತಾತ್ಕಾಲಿಕವಾಗಿ 2 ಸಾವಿರ ಪರಿಹಾರ ಘೋಷಣೆ ಮಾಡಲಾಗಿದೆ. ತಾಂತ್ರಿಕ ಸಮಸ್ಯೆಯಿಂದ ಇನ್ನೂ ಬರ ಪರಿಹಾರ ತಲುಪಿಲ್ಲ. ಕೂಡಲೇ 2 ಸಾವಿರ ರೂ. ಪರಿಹಾರ ನೀಡುತ್ತೇವೆ ಎಂದು ಸ್ಪಷ್ಟಪಡಿಸಿದರು. ಅತಿಥಿ ಉಪನ್ಯಾಸಕರ ಜೊತೆಗೆ ಈಗಾಗಲೇ ಮಾತನಾಡಿದ್ದೇವೆ. ಪ್ರತಿಭಟನೆ ವಾಪಸ್ ಪಡೆಯಲು ಮನವಿ ಮಾಡಿದ್ದೇವೆ. ಆದರೂ ಅವರು ಪಾದಯಾತ್ರೆ ಮಾಡುತ್ತಿದ್ದಾರೆ. ಸೇವಾ ಕಾಯಂ ಮಾಡುವಂತೆ ಅವರ ಬೇಡಿಕೆ ಇದೆ. ಕಾನೂನು ತೊಡಕಿನಿಂದ ಸೇವೆ ಖಾಯಂ ಮಾಡುವುದು ಕಷ್ಟ ಸಾಧ್ಯ ಎಂದು ತಿಳಿಸಿದರು. ರಾಮ ಜನ್ಮಭೂಮಿ ಕರಸೇವೆಗೂ ಮೊದಲು ಹುಬ್ಬಳ್ಳಿಯಲ್ಲಿ ನಡೆದ ಗಲಾಟೆ ಪ್ರಕರಣದಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿದ ವಿಚಾರದ ಕುರಿತು ಮಾತನಾಡಿದ ಅವರು, ಹಳೇ ಪ್ರಕರಣಗಳನ್ನೆಲ್ಲಾ ವಿಲೇವಾರಿ ಮಾಡುವಂತೆ ಸೂಚಿಸಿದ್ದೇವೆ. 1992ರಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಗಲಭೆ ಪ್ರಕರಣದ ಆರೋಪಿಗಳ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಆಗುತ್ತಿದೆ. ಅದು ಎಷ್ಟೇ ವರ್ಷ ಆಗಲಿ, ತಪ್ಪಿತಸ್ಥರನ್ನು ಸುಮ್ಮನೆ ಬಿಡಬೇಕಾ? ನಾವು ದ್ವೇಷದ ರಾಜಕಾರಣ ಮಾಡುತ್ತಿಲ್ಲ. ಹೈಕೋರ್ಟ್ ನಿರ್ದೇಶನದಂತೆ ನಾವು ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಸಮಜಾಯಿಷಿ ನೀಡಿದರು.