ಭಾರತದಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಸಂಸ್ಥೆ ಸಭೆಯಲ್ಲಿ ಚೀನಾ ಸೇರಿದಂತೆ ಹಲವು ಪ್ರಮುಖ ದೇಶಗಳು ಪಾಲ್ಗೊಂಡಿದೆ. ಈ ಸಭೆಗಾಗಿ ಪಾಕಿಸ್ತಾನ ವಿದೇಶಾಂಗ ಸಚಿವ ಬಿಲಾವಲ್ ಬುಟ್ಟೋ ಗೋವಾಗೆ ಆಗಮಿಸಿದ್ದಾರೆ. ಈ ಮೂಲಕ 12 ವರ್ಷಗಳ ಬಳಿಕ ಪಾಕಿಸ್ತಾನ ವಿದೇಶಾಂಗ ಸಚಿವರೊಬ್ಬರು ಭಾರತಕ್ಕೆ ಆಗಮಿಸಿದ ಹೆಗ್ಗಳಿಕಗೆ ಪಾತ್ರರಾಗಿದ್ದಾರೆ. ಶಾಂಘೈ ಸಹಕಾರ ಸಂಸ್ಥೆ ಸಭೆಗೆ ಆಗಮಿಸಿದ ಬಿಲಾವಲ್ ಭುಟ್ಟೋಗೆ ಭಾರತ ನೀಡಿದ ಸ್ವಾಗತ ವೈರಲ್ ಆಗಿದೆ. ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಬಿಲಾವಲ್ ಭುಟ್ಟೋಗೆ ನಮಸ್ತೆ ಮೂಲಕ ಸ್ವಾಗತಿಸಿದ್ದಾರೆ. ಆದರೆ ಪಾಕಿಸ್ತಾನ ಜೊತೆ ಫೋಟೋ ಬಳಿಕ ಹಸ್ತಲಾಘವ ಮಾಡಿಲ್ಲ. ಪಾಕಿಸ್ತಾನ ಸಚಿವರು ಭಾರತಕ್ಕೆ ಆಗಮಿಸುತ್ತಿದ್ದಾರೆ ಅನ್ನೋ ಸುದ್ದಿ ಹೊರಬಿದ್ದ ಬೆನ್ನಲ್ಲೇ ದ್ವಿಪಕ್ಷೀಯ ಮಾತುಕತೆ ಕುರಿತು ಹಲವು ಪ್ರಶ್ನೆಗಳು ಎದ್ದಿತ್ತು. ಸಭೆಗೂ ಮುನ್ನ ಸ್ಪಷ್ಟನೆ ನೀಡಿದ ಜೈಶಂಕರ್, ದ್ವಿಪಕ್ಷೀಯ ಮಾತುಕತೆ ಸಾಧ್ಯವಿಲ್ಲ. ಪಾಕಿಸ್ತಾನ ಅದೆಷ್ಟೋ ಬಾರಿ ಭಾರತದ ಮೇಲೆ ಭಯೋತ್ಪಾದಕ ಕೃತ್ಯಗಳನ್ನು ಎಸಗಿದೆ. ಆದರೆ ಎಂದಿಗೂ ಶಾಂತಿಯನ್ನು ಪ್ರತಿಪಾದಿಸುತ್ತದೆ. ಉಗ್ರವಾದದಲ್ಲಿ ನಿರತ ಆಗಿರುವ ದೇಶದ ಜತೆ ಮಾತುಕತೆ ಕಷ್ಟಸಾಧ್ಯ. ಮಾತುಕತೆ ನಡೆಸಬೇಕಾದರೆ ಇಸ್ಲಾಮಾಬಾದ್‌ಉಗ್ರವಾದ ಮುಕ್ತ ವಾತಾವರಣ ನಿರ್ಮಾಣ ಮಾಡಬೇಕು ಎಂದಿದ್ದರು. ಇತ್ತ ಮಾತುಕತೆ ಎಂದು ಅತ್ತ ಭಯೋತ್ಪಾದನೆ ನಡೆಸಬಾರದು ಎಂದು ಜೈಶಂಕರ್ ಹೇಳಿದ್ದರು. ಇದೀಗ ಜೈಶಂಕರ್ ಹಸ್ತಲಾಘವ ಮಾಡದೇ ಸ್ವಾಗತಿಸಿದ್ದಾರೆ. ಈ ಮೂಲಕ ಪಾಕಿಸ್ತಾನಕ್ಕೆ ಮಾತುಕತೆ, ಆತ್ಮೀಯತೆ ವಿಚಾರದಲ್ಲಿ ಸ್ಪಷ್ಟ ಸಂದೇಶ ನೀಡಿದೆ.