ಕಾಂಗ್ರೆಸ್ ಸರ್ಕಾರ 126 ಕೋಟಿ ರೂ. ಅನುದಾನವನ್ನು ವಾಪಸ್ ಪಡೆದ ಹಿನ್ನೆಲೆ ಶಾಸಕ ಮುನಿರತ್ನ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಧರಣಿ ಕೈಗೊಂಡಿದ್ದರು. ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಸಾಥ್ ನೀಡಿದ್ದು, ಪ್ರತಿಭಟನೆ ಹಿಂತೆಗೆದುಕೊಳ್ಳುವಂತೆ ಮನವಿ ಮಾಡಿದ್ದರು. ಬಿಎಸ್ವೈ ಭರವಸೆ ನೀಡಿದ ಹಿನ್ನೆಲೆ ಮುನಿರತ್ನ ಅವರು ಪ್ರತಿಭಟನೆ ಕೈಬಿಟ್ಟಿದ್ದು, ಅರಮನೆ ಮೈದಾನಕ್ಕೆ ತೆರಳಿ ಡಿಕೆಶಿ ಕಾಲಿಗೆ ಬಿದ್ದು ಅನುದಾನ ನೀಡುವಂತೆ ಮನವಿ ಪತ್ರ ಸಲ್ಲಿಸಿದ್ದರು. ಈ ಕುರಿತು ಸದಾಶಿವನಗರದಲ್ಲಿರುವ ಡಿಸಿಎಂ ಡಿಕೆ ಶಿವಕುಮಾರ್ ನಿವಾಸಕ್ಕೆ ತೆರಳಿ ಶಾಸಕರು ಮಾತುಕತೆ ನಡೆಸಿದ್ದಾರೆ. ಈ ವೇಳೆ ಡಿಕೆಶಿ ರದ್ದಾಗಿರುವ ಕಾಮಗಾರಿ ಪಟ್ಟಿ ಪಡೆದುಕೊಂಡಿದ್ದಾರೆ. ಅಲ್ಲದೇ ಮಾತುಕತೆಯ ವೇಳೆ ಅನುದಾನ ಬಿಡುಗಡೆ ಮಾಡುವ ಭರವಸೆಯನ್ನು ನೀಡಿದ್ದು, ನಿಮ್ಮ ಕ್ಷೇತ್ರದ ಜವಾಬ್ದಾರಿ ನನ್ನದು ಎಂದಿದ್ದಾರೆ. ಡಿಕೆಶಿ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುನಿರತ್ನ, ಡಿಕೆಶಿ ಅವರ ಕಚೇರಿಯಿಂದ ಶ್ರೀಧರ್ ಎಂಬವರು ಕರೆ ಮಾಡಿ ಬನ್ನಿ ಎಂದರು. ಹಾಗಾಗಿ ಬಂದೆ. ಯಾವ್ಯಾವ ಕಾಮಗಾರಿ ರದ್ದಾಗಿದೆ ಅದರ ಪಟ್ಟಿ ಕೊಡಿ. ಅದನ್ನು ಸರಿಪಡಿಸಿ ಕೊಡುತ್ತೇನೆ. ನಿಮ್ಮ ಕ್ಷೇತ್ರಕ್ಕೆ ಏನು ಕೆಲಸ ಆಗಬೇಕೋ ಆ ಜವಾಬ್ದಾರಿ ನನ್ನದು ಎಂದು ಡಿಕೆಶಿ ಹೇಳಿದ್ದಾರೆ. ನಾನು ಹಣ ಪಾವತಿ ಬಗ್ಗೆ, ಬಿಲ್ ಬಗ್ಗೆ ಮಾತನಾಡಿಲ್ಲ. ಹೊಸ ಅನುದಾನದ ಬಗ್ಗೆ ತಡೆ ಹಿಡಿದ 126 ಕೋಟಿ ರೂ. ಬಗ್ಗೆ ಮಾತ್ರ ಮಾತನಾಡಿದ್ದೇನೆ ಎಂದರು.