ಅನಧಿಕೃತ ಲೋಡ್ ಶೆಡ್ಡಿಂಗ್ ಕಾಟದಿಂದಾಗಿ ಹಳ್ಳಿಯ ರೈತರ ಜೊತೆಗೆ ಈಗ ಬೆಂಗಳೂರಿಗೂ ವಿದ್ಯುತ್ ಕ್ಷಾಮದ ಶಾಕ್ ಮುಟ್ಟಿದೆ. ಲೋಡ್ ಶೆಡ್ಡಿಂಗ್ಗೆ ಬೇಸತ್ತು ಬೃಹತ್ ಬೆಂಗಳೂರು ಹೋಟೆಲ್ಗಳ ಸಂಘದ ಗೌರವ ಕಾರ್ಯದರ್ಶಿ ವೀರೇಂದ್ರ ಎನ್ ಕಾಮತ್ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ. ಮುನ್ಸೂಚನೆ ಇಲ್ಲದೇ ಲೋಡ್ ಶೆಡ್ಡಿಂಗ್ ಮಾಡುವುದರಿಂದ ಹೋಟೆಲ್ ಉದ್ಯಮಕ್ಕೆ ಸಾಕಷ್ಟು ತೊಂದರೆಯಾಗುತ್ತಿದೆ. ಕೋಲ್ಡ್ ರೂಂ, ರೆಫ್ರಿಜರೇಟರ್, ಗ್ರೈಂಡರ್ಗಳಿಗೆ ಅಡಚಣೆ ಇಲ್ಲದೇ ವಿದ್ಯುತ್ ಬೇಕಾಗಿದೆ. ಆದರೆ ಈಗ ಸಾಕಷ್ಟು ತೊಂದರೆಯಾಗುತ್ತಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ಲೋಡ್ ಶೆಡ್ಡಿಂಗ್ ಬಗ್ಗೆ ಮುಂಚಿತವಾಗಿ ಮಾಹಿತಿ ನೀಡಬೇಕು. ಜೊತೆಗೆ ಅನ್ಯ ರಾಜ್ಯದಿಂದ ಶೀಘ್ರ ವಿದ್ಯುತ್ ಖರೀದಿ ಮಾಡಿ ಎಂದು ಡಿಕೆಶಿಗೆ ಪತ್ರ ಬರೆದು ಹೋಟೆಲ್ ಅಸೋಸಿಯೇಷನ್ ಮನವಿ ಮಾಡಿದೆ.