ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿದ್ದು, ಟಿಡಿಪಿ ಹಾಗೂ ಜನಸೇನಾ ಪಕ್ಷದ ಮೈತ್ರಿ ಕ್ಷೇತ್ರಗಳ ಹಂಚಿಕೆ ಮಾತುಕತೆಗಳು ನಡೆದಿವೆ.
ಟಿಡಿಪಿ ವರಿಷ್ಠ ಎನ್ ಚಂದ್ರಬಾಬು ನಾಯ್ಡು ಮತ್ತು ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಅವರು ಹೈದರಾಬಾದ್ನಲ್ಲಿರುವ ಅವರ ನಿವಾಸದಲ್ಲಿ ನಡೆದ ಮಾತುಕತೆಯಲ್ಲಿ ಮುಂದಿನ ಚುನಾವಣೆಯಲ್ಲಿ ಎರಡು ಪಕ್ಷಗಳ ನಡುವೆ ಸೀಟು ಹಂಚಿಕೆಯ ವಿಷಯದ ಬಗ್ಗೆ ಮುಖ್ಯವಾಗಿ ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ. ಪಕ್ಷದ ಮೂಲಗಳ ಪ್ರಕಾರ, ಎರಡೂ ನಾಯಕರು ಸಂಯೋಜಿತ ಚುನಾವಣಾ ಪ್ರಣಾಳಿಕೆಯನ್ನು ಶೀಘ್ರವಾಗಿ ಅಂತಿಮಗೊಳಿಸುವುದು ಮತ್ತು ಒಂದು ತಿಂಗಳೊಳಗೆ ಅಭ್ಯರ್ಥಿಗಳನ್ನು ಘೋಷಿಸುವ ಬಗ್ಗೆ ಚರ್ಚಿಸಿದ್ದಾರೆ.ಆಂಧ್ರಪ್ರದೇಶದಲ್ಲಿ ಈಗಾಗಲೇ ಚುನಾವಣಾ ವಾತಾವರಣ ನಿರ್ಮಾಣವಾಗಿದ್ದು, ಟಿಕೆಟ್ ಆಕಾಂಕ್ಷಿಗಳಿಗೆ ಶೀಘ್ರವೇ ಸ್ಪಷ್ಟತೆ ನೀಡಲು ಪ್ರತಿ ಪಕ್ಷದಿಂದ ಸ್ಪರ್ಧಿಸುವ ಸ್ಥಾನಗಳ ಬಗ್ಗೆ ತಿಳಿಸುವ ಬಗ್ಗೆ ಇಬ್ಬರೂ ನಾಯಕರು ಚರ್ಚಿಸಿರಬಹುದು ಎಂದು ಟಿಡಿಪಿ ಪೊಲಿಟ್ಬ್ಯುರೊ ಸದಸ್ಯರೊಬ್ಬರು ಹೇಳಿದ್ದಾರೆ.