ತೆಲಂಗಾಣ ಮುಖ್ಯಮಂತ್ರಿ ಕೆ.ಸಿ ಚಂದ್ರಶೇಖರ್ ರಾವ್ ನೇತೃತ್ವದ ಭಾರತ್ ರಾಷ್ಟ್ರ ಸಮಿತಿ ಪಕ್ಷದ ವತಿಯಿಂದ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ. ತೆಲಂಗಾಣ ರಾಷ್ಟ್ರ ಸಮಿತಿಯಿಂದ ಭಾರತ್ ರಾಷ್ಟ್ರ ಸಮಿತಿಯಾಗಿ ಹೆಸರು ಬದಲಿಸಿಕೊಂಡ ಬಳಿಕ ನಡೆಯುತ್ತಿರುವ ಈ ಬೃಹತ್ ಸಮಾವೇಶದಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಕೇರಳ ಸಿಎಂ ಪಿಣರಾಯಿ ವಿಜಯನ್, ಪಂಜಾಬ್ ಸಿಎಂ ಭಗವಂತ್ ಮಾನ್, ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಮತ್ತು ಸಿಪಿಐ ಜನರಲ್ ಸೆಸಿ ಡಿ ರಾಜಾ ಭಾಗಿಯಾಗಿದ್ದು, ಹೈದರಾಬಾದ್‌ನಿಂದ 200 ಕಿ.ಮೀ ದೂರದಲ್ಲಿರುವ ಖಮ್ಮಂನಲ್ಲಿ ಪ್ರತಿಪಕ್ಷಗಳ ಶಕ್ತಿ ಪ್ರದರ್ಶನವೂ ನಡೆಯುತ್ತಿದೆ.ಸಮಾವೇಶಕ್ಕೂ ತೆರಳುವ ಮುನ್ನ ಸರ್ಕಾರದಿಂದ ಬೃಹತ್ ಪ್ರಮಾಣದಲ್ಲಿ ನವೀಕರಿಸಲ್ಪಟ್ಟ ಹೈದರಾಬಾದ್ ಬಳಿಯ ಯಾದಾದ್ರಿಯಲ್ಲಿರುವ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಕೆಸಿಆರ್ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದೇ ವೇಳೆ ಮಾತನಾಡಿದ ಅವರು, ಕೆಂಪು ಕೋಟೆಯ ಮೇಲೆ ಒಂದು ದಿನ ಗುಲಾಬಿ ಧಜ್ಬ ಹಾರಲಿದೆ. ಅಬ್ ಕಿ ಬಾರ್ ಕಿಸಾನ್ ಸರ್ಕಾರ್ (ಈ ಬಾರಿ ರೈತರ ಸರ್ಕಾರ) ಘೋಷಣೆ ಕೂಗಿದ ಅವರು, ಹೊಸ ಆರ್ಥಿಕ, ಪರಿಸರ, ನೀರು, ವಿದ್ಯುತ್ ಮತ್ತು ಮಹಿಳಾ ಸಬಲೀಕರಣ ನೀತಿಗಳು ದೇಶದಲ್ಲಿ ಅಗತ್ಯವಿದೆ ಎಂದು ಹೇಳಿದರು.