PTCL ಕಾಯ್ದೆ ತಿದ್ದುಪಡಿಗೆ ಬದ್ಧ; ಯಾವುದೇ ಬಹಿರಂಗ ಒತ್ತಡಕ್ಕೆ ಮಣಿಯುವುದಿಲ್ಲ.ದಲಿತರಿಗೆ ಭೂಮಿ ಪರಭಾರೆ ಆಗ್ಲೇಬೇಕು ಅನ್ನೋದ್ರಲ್ಲಿ ರಾಜಿ ಇಲ್ಲ: ಸಿದ್ದರಾಮಯ್ಯ

ಸಿಎಂ ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಪಿಟಿಸಿಎಲ್ ಕಾಯ್ದೆ ತಿದ್ದುಪಡಿಗೆ ಸಂಬಂಧಿಸಿದಂತೆ ವಿವಿಧ ಸಂಘಟನೆಗಳ ಪ್ರತಿನಿಧಿಗಳು, ಸಚಿವರು, ಹಿರಿಯ ಅಧಿಕಾರಿಗಳು ಹಾಗೂ ಕಾನೂನು ತಜ್ಞರೊಂದಿಗೆ ಸಭೆ ನಡೆಸಿ ಚರ್ಚಿಸಿದರು. ದಲಿತರ ಜಮೀನು ಹಕ್ಕು ಕಾಪಾಡುವ ನಿಟ್ಟಿನಲ್ಲಿ ಪಿಟಿಸಿಎಲ್ ಕಾಯ್ದೆಗೆ ತಿದ್ದುಪಡಿ ಮಾಡುವ ಕುರಿತ ಸರ್ಕಾರದ ನಿಲುವನ್ನು ಆಯವ್ಯಯದಲ್ಲಿಯೂ ಸ್ಪಷ್ಟಪಡಿಸಲಾಗಿದೆ. ಪ್ರಸ್ತುತ ನಡೆಯುತ್ತಿರುವ ವಿಧಾನ ಮಂಡಲ ಅಧಿವೇಶನದಲ್ಲಿಯೇ ಕಾಯ್ದೆ ತಿದ್ದುಪಡಿ ಮಾಡುವ ಉದ್ದೇಶದಿಂದ ಸಮುದಾಯದ ಮುಖಂಡರ ಅಭಿಪ್ರಾಯ ಪಡೆಯಲು ಈ ಸಭೆ ಕರೆಯಲಾಗಿದೆ.ಮತ್ತೆ ಮತ್ತೆ ಯಾವುದೇ ವಿವಾದ ಇರಬಾರದು, ಪಿಟಿಸಿಎಲ್ ಕಾಯ್ದೆಯ ಉದ್ದೇಶ ಪರಿಣಾಮಕಾರಿಯಾಗಿ ಈಡೇರಬೇಕು. ಈ ವಿಚಾರದಲ್ಲಿ ನಮ್ಮ ಕಾಳಜಿಗಳ ಜೊತೆ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಸಿಎಂ ಸಿದ್ದರಾಮಯ್ಯ ಅವರು ಖಡಕ್ಕಾಗಿ ನುಡಿದರು. ಭೂಮಿ ಕಳೆದುಕೊಂಡವರಿಗೆ ನ್ಯಾಯಾಲಯದಲ್ಲಿ ಹಿನ್ನಡೆ ಆಗಬಾರದು ಅನ್ನೋ ಉದ್ದೇಶದಿಂದ ಈ ಬಗ್ಗೆ ದಲಿತ ಮುಖಂಡರ ಮತ್ತು ನ್ಯಾಯವಾದಿಗಳ ಅಭಿಪ್ರಾಯ ಕೇಳಿದ್ದೇನೆ. ಕಾನೂನು ತಜ್ಞರ ಅಭಿಪ್ರಾಯವನ್ನೂ ಪಡೆದುಕೊಳ್ಳುತ್ತೇವೆ. ನಾವು ಮೊದಲೇ ಕೊಟ್ಟಿದ್ದ ಭರವಸೆಯಂತೆ ಈ ಸರ್ಕಾರದ ಮೊದಲನೆ ಅಧಿವೇಶನದಲ್ಲೇ ಪಿಟಿಸಿಎಲ್ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದ್ದೇವೆ ಎಂದು ತಿಳಿಸಿದರು. ಸಭೆಯಲ್ಲಿ ಸಚಿವರಾದ ಕೃಷ್ಣಬೈರೇಗೌಡ, ಹೆಚ್.ಸಿ ಮಹದೇವಪ್ಪ, ಹೆಚ್.ಕೆ ಪಾಟೀಲ್, ಡಾ.ಜಿ ಪರಮೇಶ್ವರ್, ಕೆ.ಹೆಚ್ ಮುನಿಯಪ್ಪ, ಸತೀಶ್ ಜಾರಕಿಹೊಳಿ, ಪ್ರಿಯಾಂಕ್ ಖರ್ಗೆ, ಶಿವರಾಜ ತಂಗಡಗಿ, ನಾಗೇಂದ್ರ, ಕೆ.ಎನ್ ರಾಜಣ್ಣ, ಆರ್.ಬಿ ತಿಮ್ಮಾಪುರ ಹಾಗೂ ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಪಿ. ಮಣಿವಣ್ಣನ್, ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ಹಿರಿಯ ಐಪಿಎಸ್ ಅಧಿಕಾರಿ ಅರುಣ್ ಚಕ್ರವರ್ತಿ ಸೇರಿ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *