ಭಾರತೀಯ ದಂಡ ಸಂಹಿತೆ ಅಡಿಯಲ್ಲಿ ಜಾತಿ ದೌರ್ಜನ್ಯ ಪ್ರಕರಣಗಳಿಗೆ ಸೂಕ್ತ ನ್ಯಾಯ ಒದಗಿಸಲು ಸಾಧ್ಯ ಆಗುವುದಿಲ್ಲ ಎನ್ನುವ ಕಾರಣದಿಂದ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ, ನಾಗರಿಕ ಹಕ್ಕು ರಕ್ಷಣಾ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಸರ್ಕಾರ ಈ ಕಾಯ್ದೆಗೆ ಹೆಚ್ಚಿನ ಮಹತ್ವ ನೀಡಿ ಗಂಭೀರವಾಗಿ ಪರಿಗಣಿಸುತ್ತದೆ. ಸಂತ್ರಸ್ತರಿಗೆ ರಕ್ಷಣೆ ಸಿಗಬೇಕು. ಈ ಉದ್ದೇಶ ಸಫಲವಾಗಲು ಪೊಲೀಸ್ ಇಲಾಖೆ, ಕಾನೂನು ಇಲಾಖೆ, ಸಮಾಜಕಲ್ಯಾಣ ಇಲಾಖೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ಕೆಲಸ ಮಾಡಬೇಕು ಸಮನ್ವಯ ಇದ್ದಾಗ ಮಾತ್ರ ವ್ಯವಸ್ಥಿತವಾಗಿ ಈ ವರ್ಗದ ಜನರಿಗೆ ನ್ಯಾಯ ಸಿಗಲು ಸಾಧ್ಯವಾಗುತ್ತದೆ. ಎಂದು ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ರಾಜ್ಯಮಟ್ಟದ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆಯ ಬಳಿಕ ಅಧಿಕಾರಿಗಳಿಗೆ ಸೂಚನೆ ನೀಡಿದರು. ಪೊಲೀಸ್ ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಎರಡು ತಿಂಗಳೊಳಗೆ ಚಾರ್ಜ್ ಶೀಟ್ ಹಾಕುವ ಬಗ್ಗೆ ಎಸ್‌ಪಿಗಳಿಗೆ, ಡಿಸಿಪಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು. ಪೊಲೀಸರು ಜಾಗರೂಕತೆಯಿಂದ ತನಿಖೆ ಮಾಡಬೇಕು. ಇವುಗಳನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಶಿಕ್ಷೆ ಕೊಡಿಸಲು ಎಲ್ಲ ಪ್ರಯತ್ನ ಮಾಡಬೇಕು. ರಾಜ್ಯದಲ್ಲಿ ಶಿಕ್ಷೆ ಪ್ರಮಾಣ 3.44% ರಷ್ಟಿರುವುದು ನಾಚಿಕೆಯ ಸಂಗತಿ. ಪ್ರಜ್ಞಾವಂತ ಸಮಾಜವಿರುವ ನಮ್ಮ ರಾಜ್ಯದಲ್ಲಿ ಇಷ್ಟು ಕಡಿಮೆ ಇರುವುದು ತಲೆ ತಗ್ಗಿಸುವ ವಿಚಾರ. ಇದನ್ನು ಇನ್ನಷ್ಟು ಹೆಚ್ಚಿಸುವಂತೆ ಸೂಚಿಸಿ. ಡಿಜಿಪಿ ಅವರಿಗೆ ವರದಿ ಕಳುಹಿಸಬೇಕು ಎಂದು ಖಡಕ್ ಸೂಚನೆ ನೀಡಿದರು.