ದೇಶದ್ರೋಹಿಗಳಿಗೆ ಪಾಸ್ ಕೊಟ್ಟವರಿಗೆ ಟಿಕೆಟ್ ಕೊಟ್ಟರೆ ಹೇಗೆ ಎಂದು ಸಂಸದ ಪ್ರತಾಪ್ ಸಿಂಹಗೆ ಸಚಿವ ಪ್ರಿಯಾಂಕ್ ಖರ್ಗೆ ಟಾಂಗ್ ಕೊಟ್ಟರು. ಮುಂಬರುವ ಲೋಕಸಭಾ ಚುನಾವಣೆಗೆ ಮೈಸೂರು-ಕೊಡಗು ಕ್ಷೇತ್ರದ ಟಿಕೆಟ್ ಈ ಬಾರಿ ಪ್ರತಾಪ್ ಸಿಂಹಗೆ ಕೈತಪ್ಪಲಿದೆ ಎಂದು ಹೇಳಲಾಗುತ್ತಿದೆ. ಈ ಕುರಿತು ಪ್ರತಿಕ್ರಿಯಿಸಿದ ಖರ್ಗೆ, ಬಿಜೆಪಿ ಟಿಕೆಟ್ ಕಟ್ ಮಾಡುವುದಕ್ಕೆ ನನಗೆ ಏನು ಸಂಬಂಧ. ಅದು ಮೈಸೂರು, ಅವರಿಗೆ ಟಿಕೆಟ್ ಕೊಡ್ತಾರಾ, ಬಿಡ್ತಾರಾ ಎಂಬುದನ್ನು ನಾನು ಹೇಗೆ ಹೇಳಲಿ. ದೇಶದ್ರೋಹಿಗಳಿಗೆ ಪಾಸ್ ಕೊಟ್ಟವರಿಗೆ ಟಿಕೆಟ್ ಕೊಟ್ಟರೆ ಹೇಗೆ ಎಂದು ಪ್ರಶ್ನಿಸಿದರು. ಪಾಸ್ ಯಾರು ಕೊಟ್ಟರು ಅಂದ್ರೆ ತಾಯಿ ಚಾಮುಂಡಿ ಕೇಳಿ ಅಂತಾರೆ. ಅದೇ ರೀತಿ ಬಿಜೆಪಿ ಟಿಕೆಟ್ ಸಹ ಚಾಮುಂಡಿ ತಾಯಿಗೆ ಕೇಳಲಿ ಅಂತಾ ಬಿಜೆಪಿಯವರು ಹೇಳುತ್ತಿದ್ದಾರೆ ಎಂದರು. ಅಲ್ಲದೇ, ಸಿದ್ದರಾಮಯ್ಯ ಕೈ ಬಲ ಪಡಿಸಲು ಟಿಕೆಟ್ ಕಟ್ ಎಂಬ ಪ್ರತಾಪ್ ಸಿಂಹ ಹೇಳಿಕೆ ವಿಚಾರವಾಗಿ ಮಾತನಾಡಿ, ಯಾರು ಅವರ ಟಿಕೆಟ್ ಕಟ್ ಮಾಡಿಸುತ್ತಿದ್ದಾರೆ ಅವರೇ ಹೇಳಲಿ. ಬಿಜೆಪಿಯಲ್ಲಿ ಮಿಲಾಪಿ ಕುಸ್ತಿ ಅಂತಾ ಹೇಳುತ್ತಿದ್ದಾರೆ. ಇಂತಹ ಪ್ರಗತಿಪರ ಯುವಕನ ಹೋರಾಟ ಯಾರು ನಿಲ್ಲಿಸುತ್ತಿದ್ದಾರೆ ಅವರೇ ಹೇಳಲಿ ಎಂದು ತಿರುಗೇಟು ನೀಡಿದರು.ಕಲಬುರಗಿಗೆ ಚಕ್ರವರ್ತಿ ಸೂಲಿಬೆಲೆಗೆ ಪ್ರವೇಶ ನಿರ್ಬಂಧ ಸಂಬಂಧ ಮಾತನಾಡಿ, ಆತ ಒಬ್ಬ ಬಾಡಿಗೆ ಭಾಷಣಕಾರ. ಆತನ ಬಗ್ಗೆ ಮಾತನಾಡುವುದರಿಂದ ನನ್ನದು ಹಾಗೂ ನಿಮ್ಮದು ಸಮಯ ವ್ಯರ್ಥ. ಅವನಿಗೆ ಒಂದು ಗ್ರಾಮ ಪಂಚಾಯತ್ ಚುನಾವಣೆಗೆ ನಿಂತು ಗೆಲ್ಲುವ ಶಕ್ತಿ ಇಲ್ಲ ಎಂದು ವಾಗ್ದಾಳಿ ನಡೆಸಿದರು.