ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಡಿ.ಕೆ ಸುರೇಶ್, ಪ್ರಜಾಪ್ರಭುತ್ವದ ದೇವಸ್ಥಾನದೊಳಗೆ ಕೆಲವರು ಅಕ್ರಮವಾಗಿ ದಾಳಿ ಮಾಡಿದ್ದಾರೆ. ಭದ್ರತಾ ಲೋಪದ ಬಗ್ಗೆ ಕೇಂದ್ರ ಗೃಹ ಸಚಿವರು ಹಾಗೂ ಪ್ರಧಾನಮಂತ್ರಿಗಳು ಮಾತನಾಡಬೇಕು. ಮತ್ತು ತನಿಖೆಯಲ್ಲಿ ಪಾಸ್ ನೀಡಿದವರನ್ನು ಒಳಪಡಿಸಬೇಕು ಎಂದು ಆಗ್ರಹಿಸಿದ್ದೇವೆ. ನಾವು ಮಾತನಾಡಲು ಸೂಕ್ತವಾದ ಅವಕಾಶಕೇಳಿದ್ದೆವು. ಮಾತನಾಡುವ ಹಕ್ಕನ್ನು ಕಸಿಯುವ ಪ್ರಯತ್ನ ಲೋಕಸಭೆಯಲ್ಲಿ ಮಾಡಲಾಗುತ್ತಿದೆ. ಇದನ್ನು ಖಂಡಿಸಿ ಬಾವಿಗಿಳಿದು ಪ್ರತಿಭಟನೆ ನಡೆಸಿದೆವು. ಇದಕ್ಕೆ ಸ್ಪೀಕರ್ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಹಿನ್ನಲೆ ಇಂದು ಮೂವರನ್ನು ಅಮಾನತು ಮಾಡಿದೆ. ಪ್ರತಿಭಟನೆ ನಡೆಸುವುದು ಪ್ರತಿಯೊಬ್ಬ ಸದಸ್ಯನ ಹಕ್ಕು. ಅದನ್ನು ಕಿತ್ತುಕೊಳ್ಳಲಾಗುತ್ತಿದೆ ಎಂದು ಕಿಡಿಕಾರಿದರು.ಹಿಂದೆ ಬಿಜೆಪಿ ನಾಯಕರು ಪ್ಲೆಕಾರ್ಡ್ ಹಿಡಿದು ಪ್ರತಿಭಟನೆ ನಡೆಸಿದ್ದರು. ಇತಿಹಾಸದಲ್ಲಿ ಮೊದಲ ಬಾರಿಗೆ ಇಷ್ಟು ಜನರನ್ನು ಅಮಾನತು ಮಾಡಿದ ಕೀರ್ತಿ ಮೋದಿ ಅವರಿಗೆ ಸಲ್ಲುತ್ತದೆ. ಹಿಂದೆ ನಮ್ಮನ್ನು ವ್ಯಂಗ್ಯ ಮಾಡುವಾಗ ಬಿಜೆಪಿ ನಾಯಕರು ಎಂಜಾಯ್ ಮಾಡಿದ್ದಾರೆ ಎಂದರು.