ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಚಿವ ಶಿವಾನಂದ ಪಾಟೀಲ್ ಕಾಲಡಿಯಲ್ಲಿ ರಾಶಿ ರಾಶಿ ನೋಟುಗಳು ಇರುವ ಫೋಟೋ ಹಾಗೂ ವಿಡಿಯೋ ಸೋಶಿಯಲ್ಮೀಡಿಯಾದಲ್ಲಿ ವೈರಲ್.ಈ ಕುರಿತು ಬುಧವಾರ ಆಮ್ ಆದ್ಮಿ ಪಕ್ಷದ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ ಸದಂ ಇಂದಿಲ್ಲಿ ಮಾತನಾಡಿ, ರಾಜ್ಯದ ಸಕ್ಕರೆ ಹಾಗೂ ಜವಳಿ ಖಾತೆ ಸಚಿವ ಶಿವಾನಂದ ಪಾಟೀಲ್ ತೆಲಂಗಾಣ ರಾಜ್ಯದ ಮದುವೆ ಒಂದರಲ್ಲಿ ಕಂತೆ ಕಂತೆ ನೋಟುಗಳ ನಡುವೆ ನಡೆಸಿದ ದುಸ್ಸಾಹಸವು ಕರ್ನಾಟಕ ರಾಜ್ಯಕ್ಕೆ ಕಪ್ಪುಮಸಿ ಬೆಳೆಯುವಂತಿದೆ . ರಾಜ್ಯದಲ್ಲಿ 70% ಹೆಚ್ಚು ತಾಲೂಕುಗಳು ಇಂದು ಬರಗಾಲಪೀಡಿತವಾಗಿ ಅದರಲ್ಲೂ ಉತ್ತರ ಕರ್ನಾಟಕ ಭಾಗದ ಹಳ್ಳಿಗರೆಲ್ಲ ಬದುಕಿಗಾಗಿ ಗುಳೆ ಹೋಗುತ್ತಿರುವ ಈ ಕೆಟ್ಟ ಸಂದರ್ಭದಲ್ಲಿ ಉತ್ತರ ಕರ್ನಾಟಕದಿಂದಲೇ ಬಂದಿರುವ ಈ ಉದ್ದಟ ಮಂತ್ರಿಯ ಈ ವರ್ತನೆ ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಕಿಡಿಕಾರಿದ್ದಾರೆ.ರಾಜ್ಯದ ಮುಖ್ಯಮಂತ್ರಿಗಳು ಈ ಕೂಡಲೇ ಶಿವಾನಂದ ಪಾಟೀಲರ ರಾಜೀನಾಮೆಯನ್ನು ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು. ಇಂತಹ ಮಂತ್ರಿಗಳು ಒಂದು ಕ್ಷಣವೂ ಸಂಪುಟದಲ್ಲಿ ಮುಂದುವರಿಯಬಾರದು. ಇದು ಜನ ವಿರೋಧಿ ಸರ್ಕಾರವೆಂಬ ಅಣೆಪಟ್ಟಿ ಬರುವ ಮುಂಚೆ ಈ ಉದ್ಧಟ ಮಂತ್ರಿಯನ್ನು ಸಂಪಟದಿಂದ ಕಿತ್ತು ಹಾಕಬೇಕೆಂದು ಜಗದೀಶ್ ಒತ್ತಾಯಿಸಿದರು. ಇನ್ನೂ ಈ ಕುರಿತು ರಾಜ್ಯ ಬಿಜೆಪಿ ಕಿಡಿಕಾರಿದ್ದು, ಕಲೆಕ್ಷನ್ದಂಧೆಯಲ್ಲಿ ಕರ್ನಾಟಕ ಕಾಂಗ್ರೆಸ್ ಸಚಿವರು ನಿತ್ಯವೂ ಮಿಂದೇಳುತ್ತಿದ್ದಾರೆ. ನಾಡಿನ ಜನರಿಂದ ಲೂಟಿ ಮಾಡಿದ ಹಣದಲ್ಲಿ ಮಂತ್ರಿಗಳು ಹೇಗೆ ಮಜಾ ಉಡಾಯಿಸುತ್ತಿದ್ದಾರೆ ಎಂಬುದನ್ನು ಸಕ್ಕರೆ ಸಚಿವ ಶಿವಾನಂದ ಪಾಟೀಲರು ನೈಜ ಪ್ರಾತ್ಯಕ್ಷಿಕೆ ಮೂಲಕ ತೋರಿಸಿಕೊಟ್ಟಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ವಿರುದ್ದ ಆಕ್ರೋಶ ವ್ಯಕ್ತಪಡಿಸಿದೆ.