ದೆಹಲಿಯ ಹೊಸ ಮದ್ಯ ನೀತಿ ಪ್ರಕರಣದಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‍ಗೆ ಜಾರಿ ನಿರ್ದೇಶನಾಲಯ ಮೂರನೇ ಬಾರಿಗೆ ಸಮನ್ಸ್ ನೀಡಿದ್ದು, ಇಡಿ ಕಚೇರಿಗೆ ಆಗಮಿಸಿ ಹೇಳಿಕೆ ನೀಡುವಂತೆ ಕೋರಿ ಸಮನ್ಸ್ ಜಾರಿ ಮಾಡಿತ್ತು, ಆದರೆ ವಿಚಾರಣೆಗೆ ಆಗಮಿಸಲು ಸಾಧ್ಯವಾಗುವುದಿಲ್ಲ ಎಂದು ಕೇಜ್ರಿವಾಲ್ ತಿಳಿಸಿದ್ದಾರೆ. ಇದೇ ವೇಳೆ ನಾನು ತನಿಖೆಗೆ ಸಹಕರಿಸಲು ಸಿದ್ಧನಿದ್ದೇನೆ. ಈ ಸಮನ್ಸ್ ಕಾನೂನುಬಾಹಿರ ಎಂದು ಅವರು ಹೇಳಿದ್ದಾರೆ. ಬಿಜೆಪಿಯೊಂದಿಗೆ ಕೈಜೋಡಿಸುತ್ತಿರುವವರ ವಿರುದ್ಧ ತನಿಖಾ ಸಂಸ್ಥೆಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಪ್ರತಿಪಕ್ಷದ ನಾಯಕರನ್ನು ಬಂಧಿಸಲು ಸರ್ಕಾರ ಬಯಸಿದೆ. ಭ್ರಷ್ಟ ನಾಯಕರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ನಮ್ಮ ಮುಖ್ಯಮಂತ್ರಿಗಳನ್ನು ಬಂಧಿಸಲು ತನಿಖಾ ಸಂಸ್ಥೆ ಉದ್ದೇಶಿಸಿದೆ ಮತ್ತು ಅವರನ್ನು ಚುನಾವಣಾ ಪ್ರಚಾರದಿಂದ ತಡೆಯಲು ಬಯಸಿದೆ ಎಂದು ಆಪ್ ಆರೋಪಿಸಿದೆ.ಸಿಎಂ ಅರವಿಂದ್ ಕೇಜ್ರಿವಾಲ್ ನಡೆ ವಿರುದ್ಧ ಎಕ್ಸ್ ಮಾಡಿರುವ ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನವಾಲಾ, ಸಿಎಂ ಮೂರನೇ ಸಮನ್ಸ್‍ಗೂ ಹಾಜರಾಗಿಲ್ಲ. ಇದರಿಂದ ಅವರು ಏನನ್ನೋ ಮುಚ್ಚಿಡಲು ಪ್ರಯತ್ನಿಸುತ್ತಿದ್ದಾರೆ ಎನ್ನುವುದು ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಅದಕ್ಕಾಗಿಯೇ ಅವರು ಅಪರಾಧಿಯಂತೆ ತಲೆಮರೆಸಿಕೊಂಡಿದ್ದಾರೆ. ಮನೀಶ್ ಸಿಸೋಡಿಯಾ ಮತ್ತು ಸಂಜಯ್ ಸಿಂಗ್ ಅವರಿಗೆ ನ್ಯಾಯಾಲಯ ಜಾಮೀನು ನೀಡಿಲ್ಲ. ಇದೆಲ್ಲದರ ಹೊರತಾಗಿಯೂ ಅವರು ಅದೇ ಕಾರ್ಡ್ ಪ್ಲೇ ಮಾಡುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾರೆ.