ಅಮೆರಿಕ ಕಂಪನಿಗಳಿಂದ ರಾಜ್ಯದಲ್ಲಿ 25,000 ಕೋಟಿ ಹೂಡಿಕೆಗೆ ಆಸಕ್ತಿ

ರಾಜ್ಯದಲ್ಲಿ ಸುಮಾರು 25,000 ಕೋಟಿ ರೂಪಾಯಿ ಹೂಡಿಕೆ ಮಾಡುವ ಆಸಕ್ತಿ ಪ್ರಕಟವಾಗಿದೆ ಎಂದು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಮತ್ತು ಐಟಿ/ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.ಅಮೆರಿಕಕ್ಕೆ 12 ದಿನಗಳ ವ್ಯಾಪಾರ ಉತ್ತೇಜನಾ ಪ್ರವಾಸ ತೆರಳಿದ್ದ ರಾಜ್ಯ ನಿಯೋಗದ ನೇತೃತ್ವ ವಹಿಸಿದ್ದ ಎಂ ಬಿ ಪಾಟೀಲ ಮತ್ತು ಪ್ರಿಯಾಂಕ್ ಖರ್ಗೆ ಅವರು ವಿಕಾಸಸೌಧದಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯಕ್ಕೆ ಬಂಡವಾಳ ಆಕರ್ಷಿಸುವ ದೃಷ್ಟಿಯಿಂದ ಇದೊಂದು ಯಶಸ್ವಿ ಭೇಟಿಯಾಗಿದೆ ಎಂದರು.ಇನ್ನೂ ಈ ವೇಳೆ ಸಚಿವ ಎಂ ಬಿ ಪಾಟೀಲ ಮಾತನಾಡಿ, ಕೆಲವು ಕಂಪನಿಗಳು ಹೊಸದಾಗಿ ರಾಜ್ಯದಲ್ಲಿ ಕಾರ್ಯಾಚರಣೆ ಯೋಜನೆ ಹೊಂದಿವೆ.‌ಇನ್ನು ಕೆಲವು ಕಂಪನಿಗಳು ಈಗಾಗಲೇ ಇಲ್ಲಿ ಘಟಕಗಳನ್ನು ಹೊಂದಿದ್ದು, ತಮ್ಮ ಕಾರ್ಯಾಚರಣೆ ವಿಸ್ತರಿಸುವ ಪ್ರಸ್ತಾವ ಹೊಂದಿವೆ ಎಂದರು.ಜಾಗತಿಕ ಹೂಡಿಕೆದಾರರ ಸಮಾವೇಶವನ್ನು ಈಗ ಕರ್ನಾಟಕ ಸೇರಿದಂತೆ ‌ದೇಶದ‌ಬಹುತೇಕ ರಾಜ್ಯಗಳು ನಡೆಸುತ್ತಿವೆ. ಇಂತಹ ಸಮಾವೇಶದ ಜೊತೆಗೆ ಹೊಸ ಉಪಕ್ರಮವೊಂದನ್ನು ಕೈಗೊಳ್ಳಬೇಕು ಎಂಬುದು ನಮ್ಮ ಆಲೋಚನೆಯಾಗಿತ್ತು. ಹೀಗಾಗಿ, ಉದ್ಯಮಿಗಳಿರುವ ಹಾಗೂ ಉದ್ಯಮ ಸಂಸ್ಥೆಗಳ ಜಾಗಕ್ಕೆ ನಾವೇ ಹೋಗಿ ನಮ್ಮಲ್ಲಿರುವ ಅನುಕೂಲತೆಗಳ ಬಗ್ಗೆ ಮನವರಿಕೆ ಮಾಡಿಕೊಡಬೇಕು ಎಂಬುದು ನಮ್ಮ ಉದ್ದೇಶವಾಗಿತ್ತು ಎಂದು ವಿವರಿಸಿದರು. ಅಮೆರಿಕದ ಪೂರ್ವ ಕರಾವಳಿಯಿಂದ ಹಿಡಿದು ಪಶ್ಚಿಮ ಕರಾವಳಿವರೆಗೆ ಪ್ರಯಾಣಿಸಿ ಬೇರೆ ಬೇರೆ ಕಂಪನಿಗಳ ಉನ್ನತ ಪ್ರತಿನಿಧಿಗಳ ಜೊತೆ ಮಾತುಕತೆ ನಡೆಸಲಾಯಿತು.‌ಈ ವೇಳೆ 27 ಮುಖಾಮುಖಿ ಸಭೆಗಳು ಮತ್ತು 9 ಸಂವಾದ ಗೋಷ್ಠಿಗಳು ಸೇರಿ ಒಟ್ಟು 36 ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದೆವು. ಜೊತೆಗೆ, ಅಲ್ಲಿನ ಕೆಲವು ಕೈಗಾರಿಕೆಗಳ ಕಾರ್ಯಾಚರಣೆಯನ್ನು ಖುದ್ದು ವೀಕ್ಷಿಸಿದೆವು ಎಂದು ಹೇಳಿದರು.

Leave a Reply

Your email address will not be published. Required fields are marked *