ಅರ್ಚಕ ಹಿರೇಮಗಳೂರು ಕಣ್ಣನ್ ಅವರ ತಪ್ಪಿಲ್ಲ ಸರ್ಕಾರದ ಬೊಕ್ಕಸಕ್ಕೆ ಆರ್ಥಿಕ ನಷ್ಟ ತಪ್ಪಿಸಲು ಮುಂದಾದ ಕೆಎಎಸ್‌ಅಧಿಕಾರಿಯದ್ದೇ ತಪ್ಪು: ಸಿಎಂ ಸಿದ್ದರಾಮಯ್ಯ!

ಹಿರೇಮಗಳೂರು ಕಣ್ಣನ್ ಅವರಿಗೆ ಕಳೆದ 10 ವರ್ಷಗಳಿಂದ ನೀಡಲಾದ 4,74,000 ರೂ. ತಸ್ತೀಕ್ ಹಣವನ್ನು ವಾಪಸ್ ನೀಡುವಂತೆ ಚಿಕ್ಕಮಗಳೂರು ತಾಲೂಕು ಆಡಳಿತದಿಂದ ನೋಟಿಸ್‌ನೀಡಲಾಗಿತ್ತು. ಆದರೆ, ಈ ವಿಚಾರ ರಾಜ್ಯಾದ್ಯಂತ ಕಾಡ್ಗಿಚ್ಚಿನಂತೆ ಹರಡಿದ ಬೆನ್ನಲ್ಲಿಯೇ ಸ್ವತಃ ಮುತುವರ್ಜಿ ವಹಿಸಿದ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಅವರು ಇಡೀ ಪ್ರಕರಣದ ಬಗ್ಗೆ ಸಂಪೂರ್ಣ ಮಾಹಿತಿ ಕಲೆಹಾಕಿದ್ದರು. ಈ ವೇಳೆ ವಾರ್ಷಿಕ 24,000 ರೂ. ನೀಡಬೇಕಾದ ಹಣದ ಬದಲಾಗಿ 90,000 ರೂ. ತಸ್ತೀಕ್ ಹಣ ನೀಡಲಾಗಿದೆ. ಆದ್ದರಿಂದ ಹಣ ವಾಪಸ್ ನೀಡುವಂತೆ ನೋಟಿಸ್ ನೀಡಲಾಗಿದ್ದು, ಅದನ್ನು ವಾಪಸ್ ನೀಡುವಂತೆ ಮುಜರಾಯಿ ಇಲಾಖೆ ಆಯುಕ್ತರಿಗೆ ಸೂಚನೆ ನೀಡಿದ್ದರು. ಜೊತೆಗೆ, ಕಣ್ಣನ್ ಅವರಿಗೆ ಹೆಚ್ಚುವರಿ ಹಣವನ್ನು ಕೊಟ್ಟ ತಹಶೀಲ್ದಾರ್ ಅವರಿಂದಲೇ ಸರ್ಕಾರಕ್ಕೆ ನಷ್ಟವಾದ ಹಣವನ್ನು ವಸೂಲಿ ಮಾಡುವುದಾಗಿ ತಿಳಿಸಿದ್ದರು. ರಾಜ್ಯ ಸರ್ಕಾರದಿಂದ ಮುಜರಾಯಿ ಇಲಾಖೆಗೆ ಸೇರಿದ ದೇವಾಲಯಗಳಿಗೆ ನೀಡಲಾಗುವ ತಸ್ತೀಕ್‌ಹಣವನ್ನು ಹೆಚ್ಚಾಗಿ ಪಡೆದಿರುವುದರಲ್ಲಿ ಹಿರೇಮಗಳೂರು ಕೋದಂಡರಾಮಸ್ವಾಮಿ ದೇವಾಲಯದ ಅರ್ಚಕ ಹಿರೇಮಗಳೂರು ಕಣ್ಣನ್ ಅವರ ತಪ್ಪಿಲ್ಲ. ಆದರೂ, ಹಣ ವಾಪಸ್ ನೀಡುವಂತೆ ನೋಟಿಸ್ ನೀಡಿದ ತಹಸೀಲ್ದಾರ್ ಅವರ ತಪ್ಪಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ. ಅಂದರೆ, ಸರ್ಕಾರದ ಬೊಕ್ಕಸಕ್ಕೆ ನಷ್ಟ ತಪ್ಪಿಸಲು ಮುಂದಾದ ಕೆಎಎಸ್ ಅಧಿಕಾರಿಯದ್ದೇ ತಪ್ಪು ಎಂದು ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *