ದೇಗುಲ ಪ್ರವೇಶಿಸಲು ಅನುಮತಿ ನಿರಾಕರಣೆ – ನಾವು ಮಾಡಿದ ಅಪರಾಧವಾದ್ರೂ ಏನು: ರಾಗಾ ಪ್ರಶ್ನೆ

ಅಸ್ಸಾಂ ರಾಜ್ಯದ ನಾಗೋನ್‌ನಲ್ಲಿರುವ ಬಟದ್ರವ ಸತ್ರಾ ದೇಗುಲಕ್ಕೆ ರಾಹುಲ್ ಗಾಂಧಿ ತೆರಳಿದ್ದರು. ಆದರೆ, ದೇವಾಲಯ ಪ್ರವೇಶಿಸಲು ಅನುಮತಿ ನಿರಾಕರಿಸಲಾಯಿತು. ಈ ವೇಳೆ ದೇಗುಲದ ಆಡಳಿತ ಮಂಡಳಿಗೆ ಪ್ರಶ್ನೆ ಮಾಡಿದ ರಾಹುಲ್ ಗಾಂಧಿ, ನನಗೆ ನಿರ್ಬಂಧ ವಿಧಿಸಿರೋದು ಏಕೆ?. ನಾವು ದೇಗುಲಕ್ಕೆ ಭೇಟಿ ನೀಡಲು ಬಯಸಿದ್ದೇವೆ. ಆದರೆ, ನಮಗೆ ಅವಕಾಶ ನೀಡುತ್ತಿಲ್ಲ. ನಾವು ಮಾಡಿದ ಅಪರಾಧವಾದ್ರೂ ಏನು ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.ನಾವು ಯಾವುದೇ ತಪ್ಪು ಮಾಡಿಲ್ಲ. ಯಾವುದೇ ಸಮಸ್ಯೆ ಸೃಷ್ಟಿಸಲು ಬಂದಿಲ್ಲ. ನಾವು ಕೇವಲ ಪ್ರಾರ್ಥನೆ ಸಲ್ಲಿಸಲು ದೇಗುಲಕ್ಕೆ ಬಂದಿದ್ದೆವು ಎಂದು ರಾಹುಲ್ ಗಾಂಧಿ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ಧಾರೆ. ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ಇರುವ ಹಿನ್ನೆಲೆಯಲ್ಲಿ ಭದ್ರತಾ ಕಾರಣಗಳಿಂದಾಗಿ ರಾಹುಲ್ ಗಾಂಧಿ ಅವರು ತಮ್ಮ ಭಾರತ್ ಜೋಡೋ ನ್ಯಾಯ ಯಾತ್ರೆಯ ಮಾರ್ಗ ಬದಲಾವಣೆ ಮಾಡಬೇಕೆಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಮನವಿ ಮಾಡಿದ್ದರು. ಆದರೆ, ತಮ್ಮ ಯಾತ್ರೆಯ ಮಾರ್ಗ ಬದಲಾವಣೆ ಮಾಡಲು ರಾಹುಲ್ ಗಾಂಧಿ ಒಪ್ಪಿರಲಿಲ್ಲ.ಅಸ್ಸಾಂ ಸರ್ಕಾರದ ಮನವಿಯನ್ನು ಪರಿಗಣಿಸದೇ ತಮ್ಮ ನಿಗದಿತ ಮಾರ್ಗದಲ್ಲೇ ಯಾತ್ರೆ ಮುಂದುವರಿಸಿದ್ದರು, ಈ ಹಿನ್ನೆಲೆಯಲ್ಲಿ ರಾಹುಲ್‌ಗಾಂಧಿ ಅವರಿಗೆ ದೇವಾಲಯ ಪ್ರವೇಶಿಸಲು ಅನುಮತಿ ನಿರಾಕರಿಸಲಾಯಿತು. ಈ ನಿಲುವನ್ನ ಖಂಡಿಸಿ ನಾಗೋನ್‌ನಲ್ಲಿ ಪ್ರತಿಭಟನೆ ನಡೆಸಿದರು. ದೇಗುಲಕ್ಕೆ ಯಾರು ಭೇಟಿ ನೀಡಬೇಕು? ಯಾರು ಭೇಟಿ ನೀಡಬಾರದು ಎಂದು ಪ್ರಧಾನಿ ಮೋದಿ ಅವರು ನಿರ್ಧರಿಸಲು ಸಾಧ್ಯವಿಲ್ಲ ಎಂದು ರಾಹುಲ್ ಗಾಂಧಿ ಅಸಮಾಧಾನ ಹೊರಹಾಕಿದರು.

Leave a Reply

Your email address will not be published. Required fields are marked *