ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ದುಡಿಯುವೆ; ಗಾಲಿ ಜನಾರ್ದನ ರೆಡ್ಡಿ

ರಾಜ್ಯದಲ್ಲಿ ಬಿಜೆಪಿ- ಜೆಡಿಎಸ್ ಪಕ್ಷಕ್ಕೆ ಐತಿಹಾಸಿಕ ಗೆಲುವು ಖಚಿತ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ವಿಶ್ವಾಸ ವ್ಯಕ್ತಪಡಿಸಿದರು. ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರೆಡ್ಡಿ ಅವರು ಈ ಮೂಲಕ ತಮ್ಮ ಪಕ್ಷವನ್ನು ಬಿಜೆಪಿ ಜೊತೆ ವಿಲೀನ ಮಾಡಿದರು. ಶ್ರೀಮತಿ ಅರುಣಲಕ್ಷ್ಮಿ, ಮಾಜಿ ಸಚಿವ ಟಿ.ಜಾನ್ ಅವರ ಪುತ್ರ ಡಾ.ಥಾಮಸ್ ಜಾನ್ ಅವರೂ ಬಿಜೆಪಿ ಸೇರಿದರು. ಗಾಲಿ ಜನಾರ್ದನ ರೆಡ್ಡಿ ತಮ್ಮ ಪಕ್ಷವನ್ನು ಬಿಜೆಪಿಯಲ್ಲಿ ವಿಲೀನಗೊಳಿಸಿದ್ದಾರೆ. ಇದರಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಜೆಪಿಗೆ ದೊಡ್ಡ ಶಕ್ತಿ ಬಂದಿದೆ. ಧಾನಿ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಮಂತ್ರಿಯಾಗಿ ಮಾಡುವ ದೃಷ್ಟಿಯಿಂದ ಅವರು ಬಿಜೆಪಿ ಸೇರಿದ್ದಾರೆ ಎಂದು ನುಡಿದರು. ರಾಜ್ಯದಲ್ಲಿ ಬಿಜೆಪಿ ಪರ ವಾತಾವರಣ. ಮುಂದಿನ ಲೋಕಸಭಾ ಚುನಾವಣೆಯು ದೇಶದ ಭವಿಷ್ಯ ರೂಪಿಸಲಿದೆ ಎಂದು ಅವರು ನುಡಿದರು. ಪಕ್ಷದ ಹಿತದೃಷ್ಟಿ, ಏಳಿಗೆಗಾಗಿ ಎಲ್ಲರನ್ನೂ ತೊಡಗಿಸಿಕೊಳ್ಳಲಿದ್ದೇವೆ ಎಂದು ಅವರು ತಿಳಿಸಿದರು. ಗಾಲಿ ಜನಾರ್ದನ ರೆಡ್ಡಿ ಅವರು ಮಾತನಾಡಿ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷವನ್ನು ವಿಲೀನ ಮಾಡಿದ್ದೇವೆ. ನಮ್ಮ ಪಕ್ಷದ ಎಲ್ಲ ಕಾರ್ಯಕರ್ತರು, ಬೆಂಬಲಿಗರು ಯಡಿಯೂರಪ್ಪ ಅವರ ಆಶೀರ್ವಾದ, ವಿಜಯೇಂದ್ರರ ನೇತೃತ್ವದಲ್ಲಿ ಬಿಜೆಪಿ ಸೇರಿದ್ದೇವೆ ಎಂದು ತಿಳಿಸಿದರು. ದೇಶದ ಸಮಗ್ರತೆ, ಸರ್ವತೋಮುಖ ಅಭಿವೃದ್ಧಿಗೆ, ವಿಶ್ವಗುರುವಾಗಿ ಭಾರತವನ್ನು ತರುವ ನಿಟ್ಟಿನಲ್ಲಿ ಕೆಲಸ ಮಾಡಿದ ನರೇಂದ್ರ ಮೋದಿಜೀ ಅವರ ಕೈಯನ್ನು ಬಲಪಡಿಸಲು ಬಿಜೆಪಿ ಸೇರಿದ್ದೇನೆ. ಅಮಿತ್ ಶಾ ಜೀ ಅವರು ನನ್ನನ್ನು ದೆಹಲಿಗೆ ಆಹ್ವಾನಿಸಿದ್ದರು ಹಾಗೂ ಬಿಜೆಪಿಗೆ ಸೇರಲು ತಿಳಿಸಿದ್ದಾರೆ. ಅದರಂತೆ ಬಿಜೆಪಿ ಸೇರಿದ್ದೇನೆ ಎಂದು ತಿಳಿಸಿದರು. ಮಾನ್ಯ ಯಡಿಯೂರಪ್ಪ ಅವರು ನನಗೆ ಸಚಿವನಾಗಲು ಅತಿ ಚಿಕ್ಕ ವಯಸ್ಸಿನಲ್ಲೇ ಅವಕಾಶ ಕೊಟ್ಟಿದ್ದರು. ಬಿಜೆಪಿ ಕಟ್ಟುವ ಅನುಭವ ನನಗಾಯಿತು. ಯಡಿಯೂರಪ್ಪ ಅವರ ಪುತ್ರರೇ ರಾಜ್ಯಾಧ್ಯಕ್ಷನಾಗಿರುವ ಸಂದರ್ಭದಲ್ಲಿ ಪಕ್ಷ ಸೇರಿ ಮತ್ತೆ ಕೆಲಸ ಮಾಡುವ ಅವಕಾಶ ಸಿಗುತ್ತಿದೆ ಎಂದರು. ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ದುಡಿಯುವೆ. 

Leave a Reply

Your email address will not be published. Required fields are marked *