ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಗುತ್ತಿಗೆ ಕಾಮಗಾರಿಗಳಲ್ಲಿ 40 ಪರ್ಸೆಂಟ್ ಕಮಿಷನ್ ಆರೋಪದ ಬಗ್ಗೆ ವಿಚಾರಣೆ ನಡೆಸುತ್ತಿರುವ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ ದಾಸ್ ನೇತೃತ್ವದ ವಿಚಾರಣಾ ಆಯೋಗಕ್ಕೆ ಆಡಿಯೋ, ವಿಡಿಯೋ ಸಹಿತ ಸುಮಾರು ಆರು ಸಾವಿರ ಪುಟಗಳ ದಾಖಲೆಗಳನ್ನು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘ ಗುರುವಾರ ಸಲ್ಲಿಸಿದೆ.ನಗರದ ಕೆ.ಆರ್. ವೃತ್ತದ ಬಳಿ ಇರುವ ಲೋಕೋಪಯೋಗಿ ಇಲಾಖೆಯ ಕಚೇರಿಯಲ್ಲಿ ಸ್ಥಾಪಿಸಲಾಗಿರುವ ಆಯೋಗದ ಕಚೇರಿಗೆ ತೆರಳಿ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ಅವರಿಗೆ ದಾಖಲೆಗಳನ್ನು ಹಸ್ತಾಂತರಿಸಿ ಮಾತನಾಡಿದ ಸಂಘದ ಅಧ್ಯಕ್ಷ ಕೆಂಪಣ್ಣ, ‘ಹಿಂದಿನ ಸರ್ಕಾರ ಮಾತ್ರವಲ್ಲದೇ, ಈಗಿನ ಕಾಂಗ್ರೆಸ್ ಸರ್ಕಾರದಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ. ಅದರ ಬಗ್ಗೆಯು ದಾಖಲೆಗಳನ್ನು ಸಲ್ಲಿಸಲಾಗಿದೆ. ಲಿಖಿತ ರೂಪದಲ್ಲಿ ಮಾಹಿತಿ ನೀಡಲಾಗಿದೆ’ ಎಂದು ತಿಳಿಸಿದರು. ‘ನೀರಾವರಿ ಇಲಾಖೆ, ಲೋಕೋಪಯೋಗಿ ಇಲಾಖೆ, ಗ್ರಾಮೀಣಾಭಿವೃದ್ಧಿ ಇಲಾಖೆ, ಬಿಬಿಎಂಪಿ ಸೇರಿದಂತೆ ಎಲ್ಲಾ ಇಲಾಖೆಗಳಿಗೆ ಸಂಬಂಧಿಸಿದ ಕಮಿಷನ್ ಆರೋಪದ ಬಗ್ಗೆ ದಾಖಲೆಗಳನ್ನು ಸಲ್ಲಿಸಲಾಗಿದೆ. ಆರ್‌ಟಿಐ ಅಡಿ ಕೆಲವು ಮಾಹಿತಿ ಸಂಗ್ರಹಿಸಲಾಗುತ್ತಿದೆ. ಆ ಎಲ್ಲ ದಾಖಲೆಗಳು ಲಭ್ಯವಾದ ಬಳಿಕ ಮತ್ತೊಮ್ಮೆ ಸಲ್ಲಿಸುತ್ತೇವೆ. ಡಿಸೆಂಬರ್ ಅಂತ್ಯದೊಳಗೆ ಸಲ್ಲಿಕೆ ಮಾಡುವಂತೆ ನ್ಯಾಯಮೂರ್ತಿ ತಿಳಿಸಿದ್ದಾರೆ. ಅಷ್ಟರೊಳಗೆ ದಾಖಲೆ ಸಲ್ಲಿಕೆ ಮಾಡಲು ಪ್ರಯತ್ನಿಸುತ್ತೇವೆ’ ಎಂದು ಕೆಂಪಣ್ಣ ತಿಳಿಸಿದರು.ಯಾವುದೇ ರೀತಿಯ ಹೆಚ್ಚುವರಿ ದಾಖಲೆಗಳನ್ನು ಕೇಳಿದರೆ ನೀಡುತ್ತೇವೆ. ವಿಚಾರಣೆಗೆ ಹಾಜರಾಗುತ್ತೇವೆ’ ಎಂದರು.