ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಪ್ರಹ್ಲಾದ್ ಜೋಶಿ, ಸರಿಯಾಗಿ ಸರ್ಕಾರ ನಿರ್ವಹಿಸಲಾಗದೇ ಕೇಂದ್ರದ ಮೇಲೆ ಬೊಟ್ಟು ತೋರಿಸುತ್ತಿದ್ದಾರೆ. ಸುಳ್ಳು ಹೇಳುವುದನ್ನ ಸಿಎಂ ಸ್ವಭಾವ ಮಾಡಿಕೊಂಡಿದ್ದಾರೆ. ನಾನು ಸುಳ್ಳು ಹೇಳಿದರೆ ರಾಜಕೀಯ ನಿವೃತ್ತಿ ಹೊಂದುತ್ತೇನೆ ಎಂಬ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಪದೇಪದೆ ಸುಳ್ಳು ಹೇಳುತ್ತಲೇ ಇರುತ್ತಾರೆ. ಹೇಳೋದೆಲ್ಲವೂ ಸುಳ್ಳೇ. ಅವರು ಹತ್ತು ಬಾರಿ ನಿವೃತ್ತಿ ಪಡೆಯಬೇಕಾಗುತ್ತದೆ ಎಂದು ಲೇವಡಿ ಮಾಡಿದ್ದಾರೆ. ಎನ್ಆರ್ಡಿಫ್ ಫಂಡ್ನಲ್ಲಿ ಯುಪಿಎ ಯಾವತ್ತು ಹೆಚ್ಚು ಹಣ ಕೊಟ್ಟಿಲ್ಲ. ಆದರೆ ಹೆಚ್ಚುವರಿ ಮಾತ್ರವಲ್ಲದೆ ಅಡ್ವಾನ್ಸ್ ಹಣ ಕೊಡ್ತಿದ್ದೇವೆ. ಒಂದೇ ಒಂದು ರೂಪಾಯಿ ಜಿಎಸ್ಟಿ ಹಣ ಕೂಡ ಬಾಕಿ ಇಲ್ಲ. 10 ವರ್ಷ ಪ್ರಧಾನಿ ಮೋದಿ ಅವರ ಅವಧಿಯಲ್ಲಿ ಕೇಂದ್ರ ಪಾಲಿನ ತೆರಿಗೆ ಹಂಚಿಕೆಯಲ್ಲಿ 2.85 ಲಕ್ಷ ಕೋಟಿ ಕೊಟ್ಟಿದ್ದೇವೆ ಎಂದು ವಿವರಿಸಿದರು.ಕೇಂದ್ರ ಸರ್ಕಾರ ವಿವಿಧ ಯೋಜನೆಗಳಲ್ಲಿ ನೀಡಿದ ಅನುದಾನ ಸಂಪೂರ್ಣವಾಗಿ ಬಳಕೆ ಆಗಿಲ್ಲ. ಫೆಬ್ರವರಿ ಅಂತ್ಯ ಬಂದರೂ ಶೇ.30 ರಿಂದ 38 ರಷ್ಟು ಅನುದಾನ ಖರ್ಚು ಆಗದೇ ಉಳಿದಿದೆ ಎಂದು ಮಾಹಿತಿ ನೀಡಿದ್ದಾರೆ. ಜೊತೆಗೆ ಕೇಂದ್ರದಿಂದ ಯಾವುದೇ ವಿಶೇಷ ಅನುದಾನ ಕೊಟ್ಟಿಲ್ಲ ಎನ್ನುತ್ತಿದ್ದಾರೆ. ಆದರೆ ಕರ್ನಾಟಕ ಸರ್ಕಾರಕ್ಕೆ 50 ವರ್ಷ ಅವಧಿಗೆ 6,279 ಕೋಟಿ ರೂ. ಬಡ್ಡಿ ರಹಿತ ಸಾಲ ಕೊಟ್ಟಿದ್ದೇವೆ ಎಂದು ಸ್ಪಷ್ಟಪಡಿಸಿದರು.ಅನುದಾನ ವಿಚಾರವಾಗಿ ರಾಜ್ಯ ಸರ್ಕಾರದ ಡ್ಯಾಶ್ಬೋರ್ಡ್ನಲ್ಲಿ ಎಲ್ಲ ಮಾಹಿತಿ ಹಾಕಿದ್ದರು. ಅದನ್ನು ಡೌನ್ಲೋಡ್ ಮಾಡಲು ಬಿಜೆಪಿ ನಾಯಕರಿಗೆ ಸೂಚಿಸಿದ್ದೆ. ಅಷ್ಟರಲ್ಲಿ ಅಂಕಿ-ಅಂಶವೇ ಡಿಲೀಟ್ ಆಗಿದೆ. ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಇಲ್ಲ ಸಲ್ಲದ್ದನ್ನು ಮಾಡುತ್ತಿದ್ದಾರೆ ರಾಜ್ಯವನ್ನು ಆರ್ಥಿಕ ದುಸ್ಥಿತಿಗೆ ತಂದಿದ್ದಾರೆ ಹಾಗಾಗಿ ನಾನು ಅವರನ್ನು ಸುಳ್ಳುರಾಮಯ್ಯ ಎನ್ನುತ್ತೇನೆ ಎಂದು ಎಂದು ಸಿಎಂ ವಿರುದ್ಧ ಜೋಶಿ ಗಂಭೀರ ಆರೋಪ ಮಾಡಿದರು.