ವಿಧಾನಸಭಾ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು ಅದರಲ್ಲಿ ಗೆದ್ದು ಶಾಸಕರಾಗಿ ಆಯ್ಕೆಯಾದ ಬಿಜೆಪಿಯ 10 ಸಂಸದರಿಂದ ಸಂಸತ್ ಸ್ಥಾನಕ್ಕೆ ರಾಜೀನಾಮೆ

ಇತ್ತೀಚಿಗಷ್ಟೆ ಪಂಚರಾಜ್ಯಗಳ ವಿಧಾನಸಭಾ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಅದರಲ್ಲಿ ಗೆದ್ದು ಶಾಸಕರಾಗಿ ಆಯ್ಕೆಯಾದ 10 ಮಂದಿ ಬಿಜೆಪಿ ಸಂಸದರು ಬುಧವಾರ ತಮ್ಮ ಸಂಸತ್ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ. ಮಧ್ಯಪ್ರದೇಶದಿಂದ ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್, ಪ್ರಹ್ಲಾದ್ ಪಟೇಲ್, ರಿತಿ ಪಾಠಕ್, ರಾಕೇಶ್ ಸಿಂಗ್, ಉದಯ್ ಪ್ರತಾಪ್ ಸಿಂಗ್ ರಾಜೀನಾಮೆ ಸಲ್ಲಿಸಿದ್ದಾರೆ. ರಾಜಸ್ಥಾನದಿಂದ ರಾಜ್ಯವರ್ಧನ್ ರಾಥೋಡ್, ಕಿರೋಡಿ ಲಾಲ್ ಮೀನಾ ಮತ್ತು ದಿಯಾ ಕುಮಾರಿ ರಾಜೀನಾಮೆ ನೀಡಿದ್ದಾರೆ. ಇನ್ನೂ ಛತ್ತೀಸ್‌ಗಢದಿಂದ ಅರುಣ್ ಸಾವೊ ಮತ್ತು ಗೋಮತಿ ಸಾಯಿ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ. ಬಾಬಾ ಬಾಲಕನಾಥ್ ಮತ್ತು ರೇಣುಕಾ ಸಿಂಗ್ ಇನ್ನೂ ರಾಜೀನಾಮೆ ಸಲ್ಲಿಸಿಲ್ಲ. ಇವರಿಬ್ಬರು ಶೀಘ್ರದಲ್ಲೇ ರಾಜೀನಾಮೆ ಸಲ್ಲಿಕೆ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಅವರ ನೇತೃತ್ವದಲ್ಲಿ ಸಂಸದರು ಸ್ಪೀಕರ್ ಅವರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸಿದ್ದು, ಶಾಸಕರಾಗಿ ಮುಂದುವರೆಯಲಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಛತ್ತೀಸ್‌ಗಢ, ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಬಿಜೆಪಿ ಬಹುಮತಗಳನ್ನು ಪಡೆದು ಕಾಂಗ್ರೆಸ್ ಅನ್ನು ಮಣಿಸಿ ಸರ್ಕಾರ ರಚಿಸಲು ಸಿದ್ಧವಾಗಿದೆ. ಈ ರಾಜ್ಯಗಳಲ್ಲಿ ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದು, ಈ ನಡುವೆಯೇ ಸಂಸದರು ರಾಜೀನಾಮೆ ನೀಡಿದ್ದಾರೆ. ರಾಜಸ್ಥಾನ, ಛತ್ತೀಸ್‌ಗಢ ಮತ್ತು ತೆಲಂಗಾಣ ಮುಖ್ಯಮಂತ್ರಿಗಳು ತಮ್ಮ ರಾಜ್ಯಪಾಲರಿಗೆ ರಾಜೀನಾಮೆ ಪತ್ರವನ್ನು ನೀಡಿದ್ದಾರೆ.

Leave a Reply

Your email address will not be published. Required fields are marked *