ದ್ರಾವಿಡ ಸಿದ್ಧಾಂತದ ಕುರಿತು ಟೀಕೆ ಮಾಡಿದ್ದಕ್ಕಾಗಿ ರಾಜ್ಯಪಾಲ ಆರ್‌ಎನ್ ರವಿ ಅವರನ್ನು ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಪಕ್ಷ ತೀವ್ರ ತರಾಟೆಗೆ ತೆಗೆದುಕೊಂಡಿದೆ. ಸಂಯಮದಿಂದ ವರ್ತಿಸಿ, ಇಲ್ಲವೇ ಹುದ್ದೆ ತ್ಯಜಿಸಿ ಬಿಜೆಪಿ ಅಥವಾ ಆರ್‌ಎಸ್‌ಎಸ್‌ಗೆ ಸೇರಿಕೊಳ್ಳಿ ಎಂದು ಡಿಕೆಎಂ ಅವಾಜ್‌ಹಾಕಿದೆ.ಭಾರತದ ಹಲವಾರ ಸ್ವಾತಂತ್ರ್ಯ ಹೋರಾಟಗಾರರನ್ನು ಜಾತಿ ನಾಯಕರನ್ನಾಗಿ ಬಿಂಬಿಸಲಾಗಿದೆ. ಇದು ಬ್ರಿಟಿಷರು ಹುಟ್ಟುಹಾಕಿರುವ ದ್ರಾವಿಡ ಸಿದ್ದಾಂತದ ಷಡ್ಯಂತ್ರವಾಗಿದೆ ಎಂದು ರವಿ ಹೇಳಿಕೆ ನೀಡಿದ್ದಾರೆ.
ಈ ಕುರಿತು ಖಂಡನಾ ಹೇಳಿಕೆ ನೀಡಿರುವ ಡಿಎಂಕೆ, ‘ರಾಜಭವನ, ನಿಮ್ಮ ಬಾಯಿ ಮುಚ್ಚಿಕೊಳ್ಳಿ’ ಎಂದು ಪ್ರತಿಕ್ರಿಯಿಸಿದೆ. ಈ ವಿಚಾರವಾಗಿ ಮಾತನಾಡಿರುವ ಡಿಎಂಕೆ ನಾಯಕ ಟಿಆರ್‌ಬಾಲು, ‘ರಾಜ್ಯಪಾಲರು ಬಿಜೆಪಿಯ ತುತ್ತೂರಿಯಾಗಿ ಮಾರ್ಪಟ್ಟಿದ್ದು, ದೇಶಾದ್ಯಂತ ದ್ರಾವಿಡ ಮಾದರಿಯ ಬಗ್ಗೆ ಅಸೂಯೆಯನ್ನು ಹುಟ್ಟುಹಾಕಲು ಪ್ರಯತ್ನ ನಡೆಸಿದ್ದಾರೆ’ ಎಂದು ಆರೋಪಿಸಿದ್ದಾರೆ. ‘ತಮಿಳುನಾಡಿನ ಜನರ ತೆರಿಗೆ ಹಣವನ್ನು ರವಿ ಅವರು ಅನುಭವಿಸುತ್ತಿದ್ದಾರೆ. ರಾಜ್ಯದಲ್ಲಿ ಎಐಎಡಿಎಂಕೆ ಸಚಿವರ ಭ್ರಷ್ಟಾಚಾರ ತನಿಖೆಗೆ ಅವರು ಒಪ್ಪಿಗೆ ನೀಡುತ್ತಿಲ್ಲ. ವಿಧಾನಸಭೆಯಲ್ಲಿ ಅಂಗೀಕರಿಸಿದ ಮಸೂದೆಗಳಿಗೆ ಸಂಬಂಧಿಸಿದ ಕಡತಗಳನ್ನು ಅವರು ಅನುಮೋದಿಸುತ್ತಿಲ್ಲ. ಸುಮ್ಮನೇ ಅಲೆದಾಡುವ ಮೂಲಕ ಈ ರಾಜ್ಯದ ಜನರಿಗೆ ದ್ರೋಹ ಎಸಗುತ್ತಿದ್ದಾರೆ’ ಎಂದು ಬಾಲು ಹೇಳಿದ್ದಾರೆ.