ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಮಾವೇಶದಲ್ಲಿ ಮಾತನಾಡಿದ ಸಿದ್ದರಾಮಯ್ಯ, ನಾನು PWD ಸಚಿವರಿಗೆ ಹೇಳಿದ್ದೀನಿ. ಅವರು ಏನೂ ಹೇಳ್ತಾರೆ ಕೇಳಿಕೊಂಡು ಬಂದು ಹೇಳಲು ಹೇಳಿದ್ದೇನೆ. ರಾಜ್ಯದಲ್ಲಿ ಭ್ರಷ್ಟಾಚಾರ ನಿಲ್ಲಿಸಲು ಹೇಳಿದ್ದೀರಿ. ಅದೇ ರೀತಿ ಪ್ರಮುಖ ಬೇಡಿಕೆ ಇಟ್ಟಿದ್ದೀರಿ. ನಮ್ಮ ಸರ್ಕಾರ ಬಂದ ಮೇಲೆ ಕೆಂಪಣ್ಣ ಅವರೊಂದಿಗೆ 4-5 ಬಾರೀ ಸಭೆ ಮಾಡಿದ್ದೀವಿ. ಬಾಕಿ ಬಿಲ್ ಕೊಡಬೇಕು ಅಂತ ಹೇಳಿದ್ದೀರಿ. ಆದರೆ, ಈ ಹಿಂದೆ ನಮ್ಮ ಸರ್ಕಾರ ಇದ್ದಾಗ ಯಾವುದೇ ಬಾಕಿ ಬಿಲ್ ಉಳಿಸಿಕೊಂಡಿರಲಿಲ್ಲ. ಬಿಜೆಪಿ ಕಾಲದಲ್ಲಿ ಬಾಕಿ ಬಿಲ್ ಹೆಚ್ಚಿದೆ. ಸರ್ಕಾರದಲ್ಲಿ ಹಣ ಇಲ್ಲದಿದ್ದರೂ ಟೆಂಡರ್ ಕರೆದಿದ್ದಾರೆ. ನೀವು ಕೆಲಸ ಮಾಡಿದ್ದೀರಿ, ಹಾಗಂತ ಒಂದೇ ಬಾರಿ ಬಿಲ್ ಬಿಡುಗಡೆ ಮಾಡಿ ಅಂತ ಹೇಳಿದ್ದೀರಿ. ಆದರೆ, ನಿಮಗೆ ಹಣ ಕೊಡಲು ನಾನು ದುಡ್ಡು ಪ್ರಿಂಟ್ ಮಾಡ್ಲಾ ಎಂದು ಪ್ರಶ್ನಿಸಿದ್ದಾರೆ.ಗುತ್ತಿಗೆದಾರರಿಗೆ ಒಂದೇ ಸಾರಿ ಬಿಲ್ ಕೊಡೋಕೆ ಬರೋದಿಲ್ಲ. ಹಂತ ಹಂತವಾಗಿ ಬಿಲ್ ಕ್ಲಿಯರ್ ಮಾಡ್ತೇವೆ. ಕೇಂದ್ರ ಸರ್ಕಾರದಿಂದ ಭದ್ರಾ ಮೇಲ್ದಂಡೆ ಯೋಜನೆಗೆ 5 ಸಾವಿರ ಕೋಟಿ ರೂ. ಕೊಡ್ತೇನೆ ಅಂತ ಹೇಳಿತ್ತು. ಆದರೆ, ಇದುವರೆಗೆ ಒಂದು ರೂಪಾಯಿ ಕೂಡ ಕೇಂದ್ರ ಸರ್ಕಾರ ಕೊಟ್ಟಿಲ್ಲ. ನಮಗೆ ಕೊಡಬೇಕಾದ ತೆರಿಗೆಯ ಪಾಲನ್ನು ಕೇಂದ್ರ ಸರ್ಕಾರ ಸರಿಯಾಗಿ ಕೊಡ್ತಿಲ್ಲ. ಹೀಗಾಗಿ ನಮ್ಮ ಸರ್ಕಾರದ ಮೇಲೆ ಗುತ್ತಿಗೆದಾರರು ತಪ್ಪು ತಿಳ್ಕೋಬಾರದು. ಎಲ್ಲವನ್ನೂ ನಾನು, ಡಿಸಿಎಂ ಸಚಿವರು ಕೂತು ಮಾತನಾಡಿದ ಬಳಿಕ ಬಗೆಹರಿಸುತ್ತೇವೆ ಎಂದು ತಿಳಿಸಿದರು.