ಹೆಚ್.ಡಿ. ದೇವೇಗೌಡರ ಶಾಪವನ್ನ ಆಶೀರ್ವಾದವೆಂದು ಸ್ವೀಕರಿಸ್ತೇನೆ: ಸಿಎಂ ಸಿದ್ದರಾಮಯ್ಯ

ನನ್ನ ಮತ್ತು ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಅಂತ್ಯವಾಗಲಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಭವಿಷ್ಯ ನುಡಿದಿದ್ದಾರೆ. ವಯಸ್ಸಿನಲ್ಲಿ ದೊಡ್ಡವರಾದ ದೇವೇಗೌಡರ ಈ ಶಾಪವನ್ನು ಆಶೀರ್ವಾದ ಎಂದೇ ಸ್ವೀಕರಿಸಿದ್ದೇನೆ. ಅವರಿಗೆ ಅವರ ಪಕ್ಷಕ್ಕೆ ದೀರ್ಘ ಕಾಲ ಆಯುರಾರೋಗ್ಯವನ್ನು ಪರಮಾತ್ಮ ಕರುಣಿಸಲಿ ಎಂದು ಹಾರೈಸುತ್ತೇನೆ. ರಾಜಕೀಯ ಭಿನ್ನಾಭಿಪ್ರಾಯ ಏನೇ ಇರಲಿ, ಹಿರಿಯರು ಕಿರಿಯರಿಗೆ ಆಶೀರ್ವಾದ ಮಾಡಬೇಕು, ಶಾಪ ಕೊಡಬಾರದು. ದಶಕಗಳ ಕಾಲ ಜಾತ್ಯತೀತತೆಯ ಕಿರೀಟ ಧರಿಸಿಕೊಂಡು ಬಂದಿದ್ದ ಗೌಡರು ಇಳಿಗಾಲದಲ್ಲಿ ಅದನ್ನು ಕೆಳಗೆಸೆದು ಕೋಮುವಾದಿ ಕಿರೀಟವನ್ನು ಧರಿಸಿಕೊಳ್ಳಬೇಕಾಗಿ ಬಂದಿರುವುದರಿಂದ ನೊಂದು ಹತಾಶೆಯಿಂದ ಇಂತಹ ಹೇಳಿಕೆ ನೀಡಿರಬಹುದೆಂದು ಭಾವಿಸಿದ್ದೇನೆ. ತಾವು ಹೇಳಿದ್ದು ತಪ್ಪು ಎಂದು ಅವರಿಗೆ ಪ್ರಾಮಾಣಿಕವಾಗಿ ಅನುಸರಿಸಿದರೆ ತಮ್ಮ ಹೇಳಿಕೆಯನ್ನು ಹಿಂದಕ್ಕೆ ಪಡೆಯಬಹುದು.ಯಾವ ರಾಜಕೀಯ ಪಕ್ಷ ಕೂಡಾಮತ್ತೊಂದು ರಾಜಕೀಯ ಪಕ್ಷದ ಅಂತ್ಯವನ್ನು ಬಯಸಬಾರದು. ‘ದೇಶವನ್ನು ಕಾಂಗ್ರೆಸ್ ಮುಕ್ತ ಮಾಡುತ್ತೇವೆ’ ಎಂಬ ಸೊಕ್ಕಿನ ಮಾತುಗಳನ್ನು ಆಡುತ್ತಿರುವ ಬಿಜೆಪಿಯ ಗಾಳಿ ದೇವೇಗೌಡರಿಗೂ ಸೋಕಿದ ಹಾಗಿದೆ. ಅದಕ್ಕೆ ಇಂತಹ ಹೇಳಿಕೆ ನೀಡುತ್ತಿದ್ದಾರೆ.
ದೇವೇಗೌಡರು ಇನ್ನಷ್ಟು ಕಾಲ ರಾಜಕೀಯದಲ್ಲಿ ಸಕ್ರಿಯರಾಗಿರಬೇಕೆಂದು ಕೂಡಾ ನಾನು ಬಯಸುತ್ತೇನೆ.ಆದರೆ ಜೆಡಿಎಸ್ ಮತ್ತು ಅವರ ಹೊಸ ಮಿತ್ರ ಬಿಜೆಪಿ ಶಾಶ್ವತವಾಗಿ ವಿರೋಧ ಪಕ್ಷದಲ್ಲಿಯೇ ಇರಬೇಕೆಂದು ನಾನು ಬಯಸುತ್ತೇನೆ. ನಮ್ಮ ಕಾಂಗ್ರೆಸ್ ಪಕ್ಷ ಈ ಬಯಕೆ ಈಡೇರಿಕೆಗೆ ನಿರಂತರ ಪ್ರಯತ್ನ ಮಾಡಲಿದೆ.

Leave a Reply

Your email address will not be published. Required fields are marked *