ಹೈಕೋರ್ಟ್ ಆದೇಶದಲ್ಲಿ ಮಧ್ಯಪ್ರವೇಶಿಸಲ್ಲ- ಜಮೀರ್ ಮೇಲ್ಮನವಿ ಅರ್ಜಿ ವಿಚಾರಣೆ ನಿರಾಕರಿಸಿದ ಸುಪ್ರೀಂ

ಅಕ್ರಮ ಆಸ್ತಿಗಳಿಕೆ ಆರೋಪ ಎದುರಿಸುತ್ತಿರುವ ಸಚಿವ ಜಮೀರ್ ಅಹ್ಮದ್ ಖಾನ್ ತಮ್ಮ ವಿರುದ್ಧ ಪ್ರಕರಣ ರದ್ದು ಕೋರಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್ ನಿರಾಕರಿಸಿದೆ. ಅರ್ಜಿ ವಿಚಾರಣೆ ನಡೆಸಿದ ನ್ಯಾ.ಸಂಜೀವ್ ಖನ್ನಾ ನೇತೃತ್ವದ ದ್ವಿ ಸದಸ್ಯ ಪೀಠ ಹೈಕೋರ್ಟ್ ಆದೇಶದಲ್ಲಿ ನಾವು ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಹೇಳಿದೆ. ಜಾರಿ ನಿರ್ದೇಶನಾಲಯ ನೀಡಿದ್ದ ದಾಖಲೆಗಳ ಆಧಾರದ ಮೇಲೆ 2022 ರಲ್ಲಿ ಜಮೀರ್ ಅಹ್ಮದ್ ಖಾನ್ ನಿವಾಸದ ಮೇಲೆ ಎಸಿಬಿ ದಾಳಿ ಮಾಡಿತ್ತು. ಬಳಿಕ ಜಮೀರ್ ಅಹ್ಮದ್ ಖಾನ್ ಆದಾಯದಲ್ಲಿ 2000% ಪಟ್ಟು ಏರಿಕೆಯಾಗಿದೆ ಎಂದು ಆರೋಪಿಸಲಾಗಿತ್ತು. ಆದಾಯ ಏರಿಕೆ ಬಗ್ಗೆ ಸದ್ಯ ಲೋಕಾಯುಕ್ತ ತನಿಖೆ ನಡೆಸುತ್ತಿದೆ.ಲೋಕಾಯುಕ್ತ ನಡೆಸುತ್ತಿರುವ ತನಿಖೆಗೆ ಕೋರಿ ಮೊದಲು ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಕೋರ್ಟ್ ಅದನ್ನು ವಜಾ ಮಾಡಿತ್ತು. ಬಳಿಕ ಸುಪ್ರೀಂಕೋರ್ಟ್‍ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ತನಿಖೆಗೆ ಮಧ್ಯಂತರ ತಡೆ ನೀಡಿತ್ತು. ಮಧ್ಯಂತರ ತಡೆಯನ್ನೇ ಆಧಾರವಾಗಿಟ್ಟುಕೊಂಡು ಜಮೀರ್ ಅಹ್ಮದ್ ಖಾನ್ ತಮ್ಮ ವಿರುದ್ಧ ಪ್ರಕರಣ ರದ್ದು ಮಾಡಬೇಕು ಎಂದು ಹೈಕೋರ್ಟ್‍ಗೆ ಮತ್ತೊಂದು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿ ಹೈಕೋರ್ಟ್ ವಜಾ ಮಾಡಿತ್ತು. ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟಿಗೆ ಮೇಲ್ಮನವಿ ಸಲ್ಲಿಸಲಾಗಿತ್ತು.ಇಂದು ಪ್ರಕರಣದ ವಿಚಾರಣೆ ನಡೆಸಿದ ನ್ಯಾ. ಸಂಜೀವ್ ಖನ್ನಾ ಹೈಕೋರ್ಟ್ ಆದೇಶದಲ್ಲಿ ಮಧ್ಯಪ್ರವೇಶ ಮಾಡಲು ಸಾಧ್ಯವಿಲ್ಲ. ಈ ಹಿಂದೆ ತನಿಖೆಗೆ ನೀಡಿದ್ದ ಮಧ್ಯಂತರ ತಡೆ ಆದೇಶ ಮುಂದುವರಿಯಲಿದೆ ಎಂದು ಹೇಳಿದರು. ಸುಪ್ರೀಂಕೋರ್ಟ್ ಈ ಆದೇಶದಿಂದ ಜಮೀರ್ ಅಹ್ಮದ್ ಖಾನ್ ಗೆ ತಾತ್ಕಲಿಕ ಹಿನ್ನಡೆಯಾದಂತಾಗಿದೆ.

Leave a Reply

Your email address will not be published. Required fields are marked *